ಮೈಸೂರು:ಕೆಲಸ ಮುಗಿಸಿ ಮದ್ಯ ಸೇವಿಸುವ ವೇಳೆ ಜಗಳ ನಡೆದು ಅದು ವಿಕೋಪಕ್ಕೆ ತಿರುಗಿ ಇಬ್ಬರು ಕೊಲೆಯಾಗಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲೂಕಿನ ಕೊತ್ತೇಗಾಲ ಗ್ರಾಮದ ರವಿ ಹಾಗೂ ಬಸವ ಕೊಲೆಯಾದ ದುರ್ದೈವಿಗಳು.
ಮಹೇಶ್, ಬಸವ, ರವಿ ಸ್ನೇಹಿತರಾಗಿದ್ದು ಕಟ್ಟಡದ ಕೆಲಸ ಮಾಡುವವರು.
ಶನಿವಾರ ಕೆಲಸ ಮುಗಿಸಿ ರಾತ್ರಿ ಇವರು ಬಾರ್ವೊಂದರಲ್ಲಿ ಮದ್ಯ ಸೇವಿಸುತ್ತಿ ದ್ದರು.ಆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ಹೋಗಿದೆ.
ಮಹೇಶನ ಪತ್ನಿಯನ್ನು ರವಿ ಚುಡಾಯಿಸುತ್ತಿದ್ದ ವಿಷಯ ಕುರಿತು ಮಾತಿಗೆ ಮಾತು ಬೆಳೆದು ಪತ್ನಿಯನ್ನು ಚುಡಾಯಿಸಿದರೆ ಚೆನ್ನಾಗಿರಲ್ಲ ಎಂದು ಸ್ನೇಹಿತರಿಗೆ ಮಹೇಶ್ ಎಚ್ಚರಿಕೆ ನೀಡಿದ್ದಾನೆ.
ಕಡೆಗೆ ಮಾತು ಅತಿರೇಕಕ್ಕೆ ಹೋಗಿ ಸಿಟ್ಟಿನ ಭರದಲ್ಲಿ ಮಹೇಶ್ ಪಿಕಾಸಿಯಿಂದ ರವಿಗೆ ಹೊಡೆದಿದ್ದಾನೆ. ಈ ವೇಳೆ ರಕ್ಷಿಸಲು ಹೋದ ಬಸವನಿಗೂ ಕೂಡ ಪೆಟ್ಟು ಬಿದ್ದಿದ್ದು, ಇಬ್ಬರೂ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸರಸ್ವತಿಪುರಂ ಠಾಣೆ ಪೊಲೀಸರು
ಆರೋಪಿ ಮಹೇಶ್ ಹಾಗೂ ಕೊಲೆಗೆ ಸಹಕರಿಸಿದ ಮತ್ತೊಬ್ಬ ಸ್ನೇಹಿತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.