ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ: ಡಿಕೆ ಶಿ ಆರೋಪ

ಬೆಂಗಳೂರು: ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಹೀಗಾಗಿ ಜನರು ಜಾಗೃತರಾಗಿರಬೇಕು ಎಂದು ದೇವೇಗೌಡರೆ ಸಂದೇಶ ನೀಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿ, ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ವಿರೋಧ ಪಕ್ಷದವರ ಹಣೆಯಲ್ಲಿ ಬರೆದಿಲ್ಲ. ನಮ್ಮ ತಾಯಂದಿರ ಬದುಕು ಹಾಗೂ ಸಂಸಾರ ಉತ್ತಮವಾಗಿ ಸಾಗಲಿ ಎಂದು ನಾವು ಗೃಹಲಕ್ಷ್ಮಿ ಹಣ ನೀಡುತ್ತಿದ್ದೇವೆ. ಇದನ್ನು ತಪ್ಪಿಸಲು ಬಿಜೆಪಿ ಹಾಗೂ ಜೆಡಿಎಸ್ ಹೊರಟಿವೆ,ಜನ ಹುಷಾರಾಗಿರಬೇಕು ಎಂದು ಎಚ್ಚರಿಸಿದರು.

ರಾಜ್ಯದ ಜನ ನಮ್ಮ ಗ್ಯಾರಂಟಿ ಯೋಜನೆಗಳು ಹಾಗೂ ಆಡಳಿತವನ್ನು ಒಪ್ಪಿದ್ದಾರೆ, ಈ ಬಾರಿ ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಬಕಾರಿ ಇಲಾಖೆಯಲ್ಲಿ 700 ಕೋಟಿ ವಸೂಲಿ ಬಗ್ಗೆ ಪ್ರಧಾನಿಗಳ ಆರೋಪಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಅಮೈದಾನಇದು ಸುಳ್ಳು ಆರೋಪ, ಅವರನ್ನು ಯಾರೋ ದಾರಿತಪ್ಪಿಸಿದ್ದಾರೆ. ಈ ವಿಚಾರವಾಗಿ ಆರೋಪ ಸಾಬೀತುಪಡಿಸಿದರೆ ರಾಜಕೀಯ ತ್ಯಜಿಸುವುದಾಗಿ ಮುಖ್ಯಮಂತ್ರಿಗಳು ಬಹಿರಂಗ ಸವಾಲು ಹಾಕಿದ್ದಾರೆ ಇದಕ್ಕಿಂತ ಬೇರೇನು ಬೇಕು ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಕೋವಿಡ್ ಅಕ್ರಮ ವಿಚಾರದಲ್ಲಿ ನ್ಯಾ.ಕುನ್ಹಾ ಅವರ ಸಮಿತಿ ಸರ್ಕಾರದ ಏಜೆಂಟ್ ರಂತೆ ನಡೆದುಕೊಳ್ಳುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಕೇಳಿದಾಗ,ಬಿಜೆಪಿಯವರ ಪರವಾಗಿ ವರದಿ ಕೊಟ್ಟರೆ ಎಲ್ಲವೂ ನ್ಯಾಯಬದ್ಧ, ಅವರ ವಿರುದ್ಧವಾಗಿ ವರದಿ ಬಂದರೆ ಹೀಗೆ ಆರೋಪ ಮಾಡುತ್ತಾರೆ, ಅವರು ಏನು ಬೇಕಾದರೂ ಆರೋಪ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.