ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಯೋಗ ದಸರಾ ಉಪ ಸಮಿತಿ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲು ಮತ್ತು ದೇವಸ್ಥಾನದ ಆವರಣದಲ್ಲಿ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಯೋಗ ಅಧಿಕಾರೇತರ ಉಪಸಮಿತಿಯ ಅಧ್ಯಕ್ಷರಾದ ಎಂ.ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಯೋಗ ಸರಪಳಿಯಲ್ಲಿ ಯೋಗಪಟುಗಳು, ವಿದ್ಯಾರ್ಥಿಗಳು ಹಾಗೂ ಯುವಕರು, ಹಿರಿಯರು, ಸಾರ್ವಜನಿಕರು ಸೇರಿದಂತೆ ಮೈಸೂರಿನ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 250 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಯೋಗಪಟುಗಳು ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ, ಸೂರ್ಯ ನಮಸ್ಕಾರ, ವಜ್ರಾಸನ, ಸ್ವಾನಾಸನ, ತ್ರಿಕೋನಾಸನ, ಶವಾಸನ, ಸಿದ್ಧಾಸನ, ಅರ್ಧಚಕ್ರಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಯೋಗ ದಸರಾಗೆ ಮತ್ತಷ್ಟು ಮೆರುಗು ತಂದಿತು.
ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್.ಸಮೂಹದ ಮುಖ್ಯಸ್ಥ ಶ್ರೀಹರಿ, ಯೋಗ ದಸರಾ ಉಪಸಮಿತಿಯ ವಿಶೇಷಾಧಿಕಾರಿ ಕೆ.ರಮ್ಯ, ಕಾರ್ಯಾಧ್ಯಕ್ಷ ಅನಂತರಾಜು, ಕಾರ್ಯದರ್ಶಿ ಪುಷ್ಪ , ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ರವಿಕುಮಾರ್ ವೈ ಎಸ್ ಮತ್ತಿತರರು ಉಪಸ್ಥಿತರಿದ್ದರು.