ಸಂಡೂರು: ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಇಬ್ಬರೂ ಕೋವಿಡ್ ಸಂದರ್ಭದಲ್ಲಿ ಚೀನಾದಿಂದ ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ನಡೆಸಿದ್ದಾರೆ ಅವರನ್ನು ಯಾವ ದೇವರೂ ಕ್ಷಮಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇದನ್ನು ನ್ಯಾ.ಮೈಕೆಲ್ ಕುನ್ಹಾ ಅವರ ತನಿಖಾ ಆಯೋಗ ಪತ್ತೆ ಹಚ್ಚಿದೆ ಎಂದು ತಿಳಿಸಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಮೆಟ್ರಿಕಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬೃಹತ್ ಜನಸಮಾವೇಶವದಲ್ಲಿ ಸಿಎಂ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆ ಭಯ, ಆತಂಕದಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾಗ ಬಿಜೆಪಿ ಸರ್ಕಾರ ಮತ್ತು ಸಚಿವ ಶ್ರೀರಾಮುಲು ಹಣ ಲೂಟಿ ಮಾಡುವುದರಲ್ಲಿ ಮುಳುಗಿದ್ದರು. ನಮ್ಮ ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿ ಯವರನ್ನು ಯಾವ ದೇವರೂ ಕ್ಷಮಿಸಲ್ಲ ಎಂದು ಟೀಕಿಸಿದರು.
ಬಿಜೆಪಿ ಶ್ರೀಮಂತರ ಮತ್ತು ಮೇಲ್ವರ್ಗದವರ ಪಕ್ಷ. ಕಾಂಗ್ರೆಸ್ ಜಾರಿ ಮಾಡುವ ಎಲ್ಲಾ ಬಡವರ ಪರವಾದ ಕಾರ್ಯಕ್ರಮಗಳನ್ನು ವಿರೋಧಿಸುತ್ತದೆ. ಅಪಪ್ರಚಾರ ಮಾಡುತ್ತದೆ ಎಂದು ಕಿಡಿಕಾರಿದರು.
ಆಗ ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸಿ ಅಪಪ್ರಚಾರ ಮಾಡಿತ್ತು. ಈಗ ನಮ್ಮ ಸರ್ಕಾರದ ಐದು ಗ್ಯಾರಂಟಿಗಳನ್ನು ವಿರೋಧಿಸಿ ಅಪಪ್ರಚಾರ ಮಾಡುತ್ತಿದೆ. ಇದು ಬಿಜೆಪಿ ಜಾಯಮಾನ ಎಂದು ಟೀಕಿಸಿದರು.
ಸಂಡೂರಿನಲ್ಲಿರುವ ರಸ್ತೆ, ಶಾಲೆ, ವಸತಿ ಶಾಲೆ, ಅಂಗನವಾಡಿ, ಆಸ್ಪತ್ರೆ, ನೀರು, ನೀರಾವರಿ ಎಲ್ಲವೂ ಆಗಿರುವುದು ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ ಕಟ್ಟಿದ್ದು, ಬಿಜೆಪಿಯವರು ಕೇವಲ ಸುಳ್ಳು ಹೇಳಿಕೊಂಡು, ಜನರ ನಡುವೆ ದ್ವೇಷ ಬಿತ್ತುತ್ತಾ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಾತನಾಡಿ,78 ವರ್ಷದ ಸಿದ್ದರಾಮಯ್ಯ ಅವರು 28 ವರ್ಷದ ಯುವಕನ ರೀತಿಯಲ್ಲಿ ದಿನಕ್ಕೆ 12-14 ಗಂಟೆ ಕೆಲಸ ಮಾಡುತ್ತಿದ್ದಾರೆ
ಬೆಂಗಳೂರಿನಲ್ಲಿ ಇದ್ದಾಗಲೂ ದಿನಕ್ಕೆ ಏಳು-ಎಂಟು ಅಧಿಕಾರಿಗಳ ಸಭೆ ನಡೆಸುತ್ತಾರೆ ಎಂದು ಕೊಂಡಾಡಿದರು.
ಮೂರು ದಿನಗಳಿಂದ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಸಂಡೂರು ಕ್ಷೇತ್ರದಲ್ಲೇ , ಸಂಡೂರು ಜನರ ಮನೆ ಬಾಗಿಲಿಗೇ ಬಂದು ಮತ ಕೇಳುತ್ತಿದ್ದಾರೆ. ನಮ್ಮ ತಂದೆ ಸಮಾನರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಪೂರ್ಣಮ್ಮ ಅವರಿಗೆ ಆಶೀರ್ವಾದ ಮಾಡಿ ಅಂತ ಕೇಳುತ್ತಿದ್ದಾರೆ. ಇವರ ಮಾತು ನೆರವೇರಿಸಿ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿ ಎಂದು ಲಾಡ್ ಮನವಿ ಮಾಡಿದರು.