ದಸರಾ ತೆರೆಮರೆಯ ಹೀರೋಗಳಾದ ಮಾವುತರಿಗೆ ಸನ್ಮಾನ

ಮೈಸೂರು: ದೇಶದ ಪ್ರಮುಖ ಅಗರಬತ್ತಿ ತಯಾರಕ ಸಂಸ್ಥೆ ಸೈಕಲ್ ಪ್ಯೂರ್ ಅಗರಬತ್ತಿ ಮೈಸೂರು ದಸರಾದ ತೆರೆಮರೆಯ ಹೀರೋಗಳಾದ ಮಾವುತರಿಗೆ ಗೌರವ ಸಮರ್ಪಣೆ ಮಾಡಿತು.

ವಿಶೇಷವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯು ನಗರದಲ್ಲಿ ನಡೆಯುವ ದಸರಾ ಕಾರ್ಯಕ್ರಮದಲ್ಲಿ ಮಹತ್ವದ ಪಾತ್ರ ವಹಿಸುವ ಮಾವುತರಿಗೆ 65 ಪ್ರೆಷರ್ ಕುಕ್ಕರ್ ಗಳನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿತು.

ಆ ಮೂಲಕ ನಾಡಹಬ್ಬದಲ್ಲಿ ಪ್ರಧಾನ ಪಾತ್ರವಹಿಸುವ ಆನೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊರುವ ಮಾವುತರ ಶ್ರಮವನ್ನು ಗುರುತಿಸಿ ಶ್ಲಾಘಿಸಿದ್ದು‌ ವಿಶೇಷ.

ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ, ಮೋತಿಲಾಲ್ ಓಸ್ವಾಲ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ  ನವೀನ್ ಅಗರ್ವಾಲ್ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಐ ಬಿ ಪ್ರಭುಗೌಡ ಉಪಸ್ಥಿತರಿದ್ದರು.

ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ಇದು ಎರಡನೇ ಬಾರಿಗೆ ಮಾವುತರನ್ನು ಸನ್ಮಾನಿಸುವ ಮಹತ್ವದ ಸಮಾರಂಭ ಹಮ್ಮಿಕೊಂಡಂತಾಯಿತು.

ಈ ವೇಳೆ ಮಾತನಾಡಿದ ಅರ್ಜುನ್ ರಂಗ ಅವರು, ಮಾವುತರನ್ನು ಗೌರವಿಸುವುದು ನಮಗೆ ಹೆಮ್ಮೆ ವಿಚಾರ. ನಮ್ಮ ಸಂಸ್ಕೃತಿ, ಪರಂಪರೆಯ ಭಾಗವಾಗಿರುವ ಮೈಸೂರಿನ ಆನೆಗಳನ್ನು ಚೆನ್ನಾಗಿ ನೋಡಿಕೊಳ್ಳುವ ಮಾವುತರ ಶ್ರದ್ಧೆ ಶ್ಲಾಘನೀಯ ಎಂದು ಹೇಳಿದರು.

ಈ ತೆರೆ ಮರೆಯ ಹೀರೋಗಳನ್ನು, ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಗೌರವ ಸಲ್ಲಿಸುವ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ  ಡಾ.ಐ.ಬಿ.ಪ್ರಭು ಗೌಡ ಅವರು ಮಾತನಾಡಿ, ನಾಡ ಹಬ್ಬ ಮೈಸೂರು ದಸರಾ ಆಚರಿಸುತ್ತಿರುವ ವೇಳೆಯಲ್ಲಿಯೇ ಮಾವುತರನ್ನು ಗುರುತಿಸಿ, ಗೌರವಿಸುವುದು ಬಹಳ ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ತೆರೆ ಮರೆಯ ಹೀರೋಗಳನ್ನು ಗೌರವಿಸುತ್ತಿರುವ ಸೈಕಲ್ ಪ್ಯೂರ್ ಅಗರಬತ್ತಿಯ ಮಹತ್ತರ ಕಾರ್ಯಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದರು.