ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಪ್ರಧಾನಿಯಾದ ಜವಾಹರ್ ಲಾಲ್ ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ವಿಧಾನಸೌಧದ ಪೂರ್ವ ದಿಕ್ಕಿನ ಬಳಿ ಇರುವ ಮಾಜಿ ಪ್ರಧಾನ ಮಂತ್ರಿ ಪಂಡಿತ್ ಜವಾಹರ್‌ಲಾಲ್ ನೆಹರೂ ಅವರ 135ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಿಎಂ ಮಾತನಾಡಿದರು.
ಜವಾಹರ್ ಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ನೆಹರೂ ಅವರಿಗೆ ಮಕ್ಕಳ ಬಗ್ಗೆ ಬಹಳ ಪ್ರೀತಿಯಿದ್ದುದ್ದರಿಂದ ಅವರನ್ನು ಚಾಚಾ ನೆಹರೂ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಸುಮಾರು 17 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶದಲ್ಲಿ ಮಿಕ್ಸಡ್ ಎಕಾನಮಿ ಜಾರಿ ಮಾಡಿದರು. ಸಮಾಜವಾದಿಯಾಗಿದ್ದ ನೆಹರೂ ಕಾಂಗ್ರೆಸ್ ಪಕ್ಷವನ್ನು ಸಮಾಜವಾದಿಯಾಗಿಸಿದ ರೂವಾರಿ. ನೆಹರೂ, ಲೋಹಿಯಾ ಮೊದಲಾದವರು ಸೇರಿ ಸೋಷಿಯಲಿಸ್ಟ್ ಕಾಂಗ್ರೆಸ್ ಕಟ್ಟಿದರು.
17 ವರ್ಷಗಳಲ್ಲಿ ದೇಶದ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ಬೃಹತ್ ಕೈಗಾರಿಕೆ, ಅಣೆಕಟ್ಟು, ನೀರಾವರಿ, ಉದ್ಯೋಗ ಸೃಷ್ಟಿ ಮಾಡಿದರು ಎಂದು ಸಿದ್ದರಾಮಯ್ಯ ವಿವರಿಸಿದರು.
ವಿಜ್ಞಾನ ಮತ್ತು ವೈಚಾರಿಕತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು, ಇಂದು ಆಧುನಿಕ ಭಾರತವನ್ನು ನಾವು ಕಾಣುತ್ತಿದ್ದರೆ ಅದಕ್ಕೆ ನೆಹರೂ ಅವರ ಕೊಡುಗೆ ಅಪಾರವಾಗಿದೆ. ಆಹಾರ ಸ್ವಾವಲಂಬನೆಗೆ ನೆಹರೂ, ಇಂದಿರಾ ಗಾಂಧಿ, ಜಗಜೀವನ್ ರಾಂ, ಲಾಲ್ ಬಹದ್ದೂರ್ ಶಾಸ್ತ್ರಿ ಅವರೆಲ್ಲರೂ ಕಾರಣ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರೂ ಕಡೆ ಗೆಲ್ಲಲಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿ ದರು.
ಆಪರೇಶನ್ ಕಮಲದ ಬಗ್ಗೆ ಮುಖ್ಯಮಂತ್ರಿಗಳು ದಾಖಲಾತಿಗಳಿದ್ದರೆ ತನಿಖೆ ಮಾಡಿಸಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ವಿಜಯೇಂದ್ರ ಮೊನ್ನೆ ಮೊನ್ನೆ ಬಂದಿದ್ದಾರೆ, ಈ ಬಗ್ಗೆ ಉತ್ತರ ನೀಡುವುದಿಲ್ಲ ಎಂದು ಹೇಳಿದರು.