ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿರುದ್ಧ ಆರ್ಟಿಐ ಕಾರ್ಯಕರ್ತ ಗಂಗರಾಜು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಪತ್ನಿ ಪಾರ್ವತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅನುಮೋದಿತ 20 ಗುಂಟೆ ಜಾಗವನ್ನು ಖರೀದಿ ಮಾಡಿದ್ದಾರೆ. ಅದರಲ್ಲಿ ರಸ್ತೆ ಮತ್ತು ಪೈಪ್ ಲೈನ್ಗೆ ಸೇರಿದ್ದ ಜಾಗವನ್ನು ರಿಜಿಸ್ಟರ್ ಮಾಡಿಕೊಂಡಿದ್ದು, ಆ ವಿಚಾರ ತಿಳಿಯುತ್ತಿದ್ದಂತೆ ರಿಜಿಸ್ಟ್ರೇಷನ್ ತಿದ್ದುಪಡಿ ಮಾಡಿಸಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಪತ್ನಿ ಪಾರ್ವತಿ ಮುಡಾ ಅನುಮೋದಿತ 20 ಗುಂಟೆ ಜಾಗವನ್ನು 29.6.2023 ರಲ್ಲಿ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೆಆರ್ಎಸ್ ರಸ್ತೆಯಲ್ಲಿರುವ ಸರ್ವೆ ನಂಬರ್ 454 ರಲ್ಲಿ ಗಣೇಶ್ ದೀಕ್ಷಿತ್ ಎಂಬುವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗದಲ್ಲಿ, 20 ಗುಂಟೆ ಜಾಗವನ್ನ 1 ಕೋಟಿ 85 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ. 20 ಗುಂಟೆ ಅಂದರೆ 21,771/99 ಚದರ್ ಅಡಿ ಜಾಗದ ಪೈಕಿ 8998 ಚದರ್ ಅಡಿ ರಸ್ತೆ ಮತ್ತು ಪೈಪ್ ಲೈನ್ ಜಾಗವಾಗಿದ್ದು, ಅದನ್ನು ಸೇರಿಸಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಈ ಬಗ್ಗೆ ಆರ್ಟಿಐ ಕಾರ್ಯಕರ್ತರು ಅರ್ಜಿ ಹಾಕುತ್ತಿದ್ದಂತೆ ಪಾರ್ವತಿ ಅವರು 31.08.2024 ರಲ್ಲಿ ಮುಡಾಗೆ ಸೇರಿದ ರಸ್ತೆ ಮತ್ತು ಪೈಪ್ ಲೈನ್ ಜಾಗವನ್ನ ಬಿಟ್ಟು ರಿಜಿಸ್ಟ್ರೇಷನ್ ತಿದ್ದುಪಡಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.