ಫೆಂಗಲ್ ಚಂಡಮಾರುತದ ಅಬ್ಬರ:9 ಮಂದಿ ಸಾವು

ಚೆನ್ನೈ: ಫೆಂಗಲ್ ಚಂಡಮಾರುತದ ಅಬ್ಬರದಿಂದ ವಿಲ್ಲುಪುರಂ ಮತ್ತು ಪುದುಚೇರಿಯಲ್ಲಿ ಭಾರೀ ಮಳೆ ಆಗುತ್ತಿದ್ದು 9 ಮಂದಿ ಮೃತಪಟ್ಟಿದ್ದಾರೆ.

ಶನಿವಾರ ರಾತ್ರಿಯಿಂದ ವಿಲ್ಲುಪುರಂ, ಪುದುಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಇದರ ಪರಿಣಾಮವಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ದಾಖಲೆಯ 49 ಸೆಂ.ಮೀ ಮಳೆಯಾದಂತಾಗಿದೆ

ಇದು ಪುದುಚೇರಿ ಇತಿಹಾಸದಲ್ಲಿಯೇ ಅತ್ಯಧಿಕ ಮಳೆ ಮತ್ತು ವಿಲ್ಲುಪುರಂನಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು,
ಮೈಲಂನಲ್ಲಿನ ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ 51 ಸೆಂ.ಮೀ.ನಷ್ಟು ಮಳೆ ಆಗಿದೆ.

ಪುದುಚೇರಿಯಲ್ಲಿ ಮಳೆಯಿಂದಾಗಿ ನಾಲ್ವರು, ತಿರುವಣ್ಣಾಮಲೈನಲ್ಲಿ ಮೂವರು ಮತ್ತು ವೆಲ್ಲೂರು ಮತ್ತು ಚೆನ್ನೈ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಮಳೆಯಿಂದಾಗಿ ವೆಲ್ಲೂರು, ರಾಣಿಪೇಟ್, ತಿರುಪತ್ತೂರ್, ಧರ್ಮಪುರಿ ಮತ್ತು ಸೇಲಂನಲ್ಲಿ ಶಾಲೆಗಳು ಮತ್ತು ತಿರುವಣ್ಣಾಮಲೈ, ಕಡಲೂರು, ವಿಲ್ಲುಪುರಂ, ಪುದುಚೇರಿ ಮತ್ತು ಕೃಷ್ಣಗಿರಿಯಲ್ಲಿ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

ದಾಖಲೆ ಮಳೆಯಿಂದಾಗಿ ಪುದುಚೇರಿಯಲ್ಲಿನ ಜನವಸತಿ ಪ್ರದೇಶಗಳು ಮತ್ತು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಉಪ್ಪನಾರ್ ಕಾಲುವೆ ತುಂಬಿ ಹರಿಯುತ್ತಿದೆ. ವಿಲ್ಲುಪುರಂ ಜಿಲ್ಲೆಯ ಕೆಲವು ಭಾಗಗಳು ಜಲಾವೃತಗೊಂಡು ಜನ ಹೈರಾಣಾಗಿದ್ದಾರೆ.

ಮಂಗಳವಾರ ಕೂಡಾ ತಿರುಪತ್ತೂರ್, ಕೃಷ್ಣಗಿರಿ, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರ್, ಈರೋಡ್, ನೀಲಗಿರಿ, ಕೊಯಮತ್ತೂರು, ತಿರುಪ್ಪೂರ್, ದಿಂಡಿಗಲ್ ಮತ್ತು ಥೇಣಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.