ಮೈಸೂರು: ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮಾಧ್ಯಮಗಳೊಂದಿಗೆ ಸಿಟ್ಟಿನಿಂದ ವರ್ತಿಸಿದ ಪ್ರಸಂಗ ನಡೆಯಿತು.
ಕಚೇರಿಗೆ ವಿಚಾರಣೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳು ನಟೇಶ್ ಅವರ ವಿಡಿಯೋವನ್ನು ಚಿತ್ರೀಕರಿಸಲು ಮುಂದಾದರು.
ಈ ವೇಳೆ ಸಿಟ್ಟಾದ ನಟೇಶ್, ನನ್ನ ವಿಡಿಯೋ ಯಾಕೆ ಮಾಡ್ತೀರಾ ನಾನೇನು ಡ್ಯಾನ್ಸ್ ಮಾಡ್ತಿದೀನ ಅಂತಾ ಇಂಗ್ಲೀಷ್‌ನಲ್ಲಿ ಪ್ರಶ್ನಿಸಿ ಗರಂ ಆದರು.
ಅಲ್ಲದೇ ಕೈಯಲ್ಲಿ ತಂದಿದ್ದ ದಾಖಲೆಗಳನ್ನ ಟೇಬಲ್ ಮೇಲೆ ಕುಕ್ಕಿ ದರ್ಪ ಪ್ರದರ್ಶಿಸಿದರು.
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 14 ಸೈಟ್‌ಗಳು ನಟೇಶ್ ಅವಧಿಯಲ್ಲಿ ಮಂಜೂರಾಗಿತ್ತು. ಸಭೆ ಮಾಡಿದ್ದು, ಸೈಟ್ ಹಂಚಿದ್ದು, ಖಾತೆ ಮಾಡಿಸಿದ್ದು ಎಲ್ಲವೂ ನಟೇಶ್ ಅವಧಿಯಲ್ಲೇ.
ಸೈಟ್ ಹಂಚಿಕೆಯ ವೇಳೆ ಸಿದ್ದರಾಮಯ್ಯ ಅವರ ಪ್ರಭಾವ ಇತ್ತು ಎಂಬ ಆರೋಪ ನಟೇಶ್ ಮೇಲಿದೆ.ಹಾಗಾಗಿ ನಟೇಶ್ ಹೇಳಿಕೆ ಬಹಳ ಮಹತ್ವ ಪಡೆದಿದೆ.
ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಡಿ.ಬಿ ನಟೇಶ್ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯ ಗೃಹ ಇಲಾಖೆ ಕಳೆದ ವಾರ ಅನುಮತಿ ನೀಡಿತ್ತು.
ನಗರದ ಮಲ್ಲೇಶ್ವರಂನ 10ನೇ ಕ್ರಾಸ್ ನಲ್ಲಿರುವ ನಟೇಶ್ ಮನೆ ಮೇಲೆ ಈ ಹಿಂದೆ ಇಡಿ ಅಧಿಕಾರಿಗಳು ದಾಳಿ ಮಾಡಿ,ಸತತ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮಾಡಿ 4 ಬ್ಯಾಗ್ ಕೊಂಡೊಯ್ದಿದ್ದರು.
ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅವರು ಈಗಾಗಲೇ ಇಡಿ ಅಧಿಕಾರಿಗಳ ಮುಂದೆ ಮೂರು ಬಾರಿ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ ಹೊರಬಂದ ನಟೇಶ್ ಅವರನ್ನು ಮಾಧ್ಯಮಗಳು ಮಾತನಾಡಿಸಲು ಮುಂದಾಗುತ್ತಿದ್ದಂತೆ ಯಾವುದೇ ಪ್ರತಿಕ್ರಿಯೆ ನೀಡದೆ ಅವರು ಸುಮ್ಮನೆ ಹೊರಟು ಹೋದರು.
ದೃವಕುಮಾರ್ ವಿಚಾರಣೆ:
ಸಿಎಂ ಪರಮಾಪ್ತ, ಮುಡಾ ಮಾಜಿ ಅಧ್ಯಕ್ಷ ದೃವಕುಮಾರ್ ಅವರ ವಿಚಾರಣೆಯನ್ನು ಲೋಕಾಯುಕ್ತ ಎಸ್ ಪಿ ಉದೇಶ್ ಅವರು ಇದೇ ವೇಳೆ ನಡೆಸಿದರು.