ಮುಡಾದಲ್ಲಿ ಮತ್ತೊಂದು ಪ್ರಕರಣ ಬಯಲಿಗೆ

ಮೈಸೂರು: ಮುಡಾದಲ್ಲಿನ ಅಕ್ರಮ ಸೈಟು ಹಂಚಿಕೆ ಹಗರಣದ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.

ಮುಡಾದ ಸಿಬ್ಬಂದಿ ಹಾಗೂ ನೌಕರರೇ

ದಾಖಲೆಗಳನ್ನ ತಿರುಚಿ‌ ನಕಲಿ‌ ದಾಖಲೆ ಸೃಷ್ಠಿಸಿ ಕೋಟಿ ಕೋಟಿ ಹಣ ಗುಳುಂ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮುಡಾ ಪ್ರಾಧಿಕಾರಕ್ಕೆ ಗ್ರಾಹಕರು ಕಟ್ಟಿದ್ದ ಹಣವನ್ನ ಮುಡಾ ಸಿಬ್ಬಂದಿ ಮತ್ತು ನೌಕರರು ನುಂಗಿದ್ದು, ಬೇಲಿಯೇ ಎದ್ದು‌ ಹೊಲ ಮೇಯ್ದಂತೆ ಆಗಿದೆ.

ಈ ಹಗರಣ ಸಂಬಂಧ  ಆರ್ ಟಿ ಐ ಕಾರ್ಯಕರ್ತ ಗಂಗರಾಜು ದಾಖಲೆ ಬಿಡುಗಡೆ ಮಾಡಿದ್ದಾರೆ. ಗ್ರಾಹಕರು ತಮ್ಮ ನಿವೇಶನಗಳಿಗೆ ಸೇವೆ ಪಡೆಯಲು ಸಿ ಆರ್, ಖಾತೆ ವರ್ಗಾವಣೆ, ಟೈಟಲ್‌ ಡೀಡ್ ಸೇವೆ ಪಡೆಯಲು ಲಕ್ಷ- ಲಕ್ಷ ಹಣ‌ ಕಟ್ಟಿದ್ದರು.

ಆದರೆ ಮುಡಾ ಸಿಬ್ಬಂದಿ ಬ್ಯಾಂಕಿನ ಖಾತೆಗೆ ಹಣ ಕಟ್ಟದೆ ಗ್ರಾಹಕರನ್ನೇ ಯಾಮಾರಿಸಿ, ನಕಲಿ ಚಲನ್ ಗಳನ್ನು ಸೃಷ್ಠಿ ಮಾಡಿ ಹಣ ದೋಚಿದ್ದಾರೆ.

5 ಕೋಟಿಗೂ ಅಧಿಕ ಹಣವನ್ನ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ವಿಚಿತ್ರವೆಂದರೆ ಪ್ರಕರಣದಲ್ಲಿ ಗ್ರಾಹಕರ ಮೇಲೆಯೇ ಎಫ್ ಐ ಆರ್ ದಾಖಲು ಮಾಡಲಾಗಿದೆ.

ಮುಡಾ ಪ್ರಾಧಿಕಾರದಿಂದ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಮ್ಮ ಮೇಲೆ ದೂರು‌ ದಾಖಲಾದ ಬಳಿಕ ಗ್ರಾಹಕರು ಕಂಗಾಲಾಗಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ‌ ಬಗ್ಗೆ ಸೂಕ್ತ ‌ತನಿಖೆ ನಡೆಸಿ ಸತ್ಯ ಬಯಲಿಗೆ ತಂದು ಗ್ರಾಹಕರಿಗೆ ನ್ಯಾಯ ಕೊಡುವರೆ ಕಾದು ನೋಡಬೇಕಿದೆ.