ಮೈಸೂರು: ಮುಡಾ 50:50 ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ.
ಈ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಕೋರ್ಟ್ ನ.26ಕ್ಕೆ ಡೆಡ್ ಲೈನ್ ನೀಡಿದ್ದು ಲೋಕಾಯುಕ್ತ ಎಸ್ ಪಿ ಉದೇಶ್ ಬೆಂಗಳೂರಿಗೆ ತೆರಳಿ ವರದಿ ಸಲ್ಲಿಸಲಿದ್ದಾರೆ.
ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಲಿರುವ ಲೋಕಾಯುಕ್ತ ಎಸ್ಪಿ ಉದೇಶ್ ಸುಮಾರು 400 ಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಕೆ ಮಾಡಲಿದ್ದಾರೆ.
ವರದಿಯಲ್ಲಿ ಎ1 ಆರೋಪಿ ಸಿದ್ದರಾಮಯ್ಯ, ಎ2 ಆರೋಪಿ ಬಿ.ಎನ್.ಪಾರ್ವತಿ, ಎ3 ಆರೋಪಿ ಮಲ್ಲಿಕಾರ್ಜುನ ಸ್ವಾಮಿ , ಎ4 ಆರೋಪಿ ದೇವರಾಜು ಅವರ ಪೂರ್ಣ ವಿಚಾರಣಾ ವರದಿ, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ, ಕೆಸರೆ ಸರ್ವೆ ನಂಬರ್ 464 ರ 3.16 ಎಕರೆ ಭೂಮಿ ಸರ್ವೆ, ವಿಜಯನಗರದ 14 ಸೈಟ್ ಗಳ ಸರ್ವೆ ಕಾರ್ಯ, ಈ ಹಿಂದೆ ಸಚಿವರಾಗಿದ್ದ ಬಚ್ಚೇಗೌಡರ ವಿಚಾರಣಾ ವರದಿ, ಹಿಂದಿನ ಆಯುಕ್ತರಾದ ನಟೇಶ್, ಪಾಲಯ್ಯ ಅವರ ಹೇಳಿಕೆ , ಹಿಂದಿನ ಅಧ್ಯಕ್ಷರಾದ ದ್ರುವಕುಮಾರ್ ಅವರಿಗೆ ನೀಡಿರುವ ನೋಟಿಸ್, ಹಿಂದೆ ಮುಡಾದಲ್ಲಿ ಕೆಲಸ ಮಾಡಿರುವ ಅಧಿಕಾರಿಗಳ ವಿಚಾರಣೆ, ಮುಡಾದಲ್ಲಿ ದಾಖಲೆಗಳ ಸಂಗ್ರಹದ ವರದಿ, ಅಧಿಕಾರಿಗಳು ಈವರಗೆ ನಡೆಸಿರುವ ವಿಚಾರಣೆ, ತನಿಖೆಯ ವರದಿಯನ್ನು ನ್ಯಾಯಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.
ನಾಳೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಮುಖ ದಿನವಾಗಿದ್ದು,ಮಂಗಳವೊ ಅಮಂಗಳವೊ ಕಾದು ನೋಡಬೇಕಿದೆ.
ನಾಳೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರು ಕೇಳುವ ಪ್ರಶ್ನೆಗೆ ಉತ್ತರಿಸಬೇಕಿದೆ.