ಮುಡಾ ಹಗರಣದಲ್ಲಿ ಸಿಎಂ ಸೇರಿ ಎಲ್ಲಾ ರಾಜೀನಾಮೆ ಕೊಡುತ್ತಾರೆ:ಸ್ನೇಹಮಯಿ ಕೃಷ್ಣ

ಮೈಸೂರು:  ಮುಡಾ ಹಗರಣದಲ್ಲಿ ಮರಿಗೌಡ ಅಷ್ಟೇ ಅಲ್ಲ ಸಚಿವ ಮಹದೇವಪ್ಪ ಕೂಡ ರಾಜೀನಾಮೆ ಕೊಡ್ತಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ. ಮುಡಾ ಹಗರಣದಲ್ಲಿ ಸಿಎಂ ಸೇರಿ ಎಲ್ಲರೂ ಕೂಡ ರಾಜೀನಾಮೆ ಕೊಟ್ಟು ಜೈಲಿಗೆ ಹೋಗುವ ಸಮಯ ಬರತ್ತದೆ ಎಂದು‌ ಹೇಳಿದರು.

ಸಚಿವ ಮಹದೇವಪ್ಪ ಕೂಡ ಅಕ್ರಮಗಳಿಗೆ ಸಹಕಾರ ನೀಡಿದ್ದಾರೆ,ಅವರ ತಮ್ಮನ ಮಗ ನವೀನ್ ಬೋಸ್ ಹೆಸರಲ್ಲಿ ಸೆಟೆಲ್ ಮೆಂಟ್ ಡೀಡ್ ಮೂಲಕ ಸೈಟ್ ಪಡೆದುಕೊಂಡಿದ್ದಾರೆ. ಇದಕ್ಕೆ ಮಹದೇವಪ್ಪ ಸಹಕಾರ ಇದೆ ಎಂದು ಸ್ನೇಹಮಯಿ‌ ಕೃಷ್ಣ ಆರೋಪಿಸಿದರು.

ಸಿಎಂ ಸೂಚನೆ ಮೇರೆಗೆ ರಾಜೀನಾಮೆ ಕೊಟ್ಟಿದ್ದೇನೆ ಎಂಬುದಾಗಿ ಮರಿಗೌಡ ಹೇಳಿರುವುದು ಸುಳ್ಳು, ತಪ್ಪು ಮಾಡಿದ್ದಾರೆ ಅದಕ್ಕೇನೆ ರಾಜೀನಾಮೆ ಕೊಟ್ಟಿದ್ದಾರೆ ಅಷ್ಟೇ ಎಂದು ತಿಳಿಸಿದರು.

ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ಲಕ್ಷ್ಮಣ್ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ,ಆತ ಅಯೋಗ್ಯ,ಇಂತಹುದಕ್ಕೆಲ್ಲ ನಾನು ಹೆದರುವುದಿಲ್ಲ. ಲಕ್ಷ್ಮಣ್ ಸುಮ್ಮನೆ ಆರೋಪ ಮಾಡ್ತಾರೆ,ಇದುವರೆಗೆ ಒಂದು ದಾಖಲೆ ಬಿಡುಗಡೆ ಮಾಡಿಲ್ಲ.ಅವರಿಗೆ ತಾಕ್ಕತ್ತಿದ್ದರೆ ನನ್ನ ಮೇಲೆ ದಾಖಲೆ ಕೊಟ್ಟು ಮಾತನಾಡಲಿ‌ ಎಂದು ಸ್ನೇಹಮಯಿ ಕೃಷ್ಣ ಸವಾಲು ಹಾಕಿದರು.