ಬೆಂಗಳೂರು: ಪದೇಪದೇ ಪಕ್ಷದ ನಾಯಕತ್ವದ ಕುರಿತು ಮುಜುಗರ ತರುವ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರ ಬಿಜೆಪಿ ಶಿಸ್ತುಸಮಿತಿ ಶೋಕಾಸ್ ನೋಟಿಸ್ ನೀಡಿದೆ.
ಯತ್ನಾಳ್ ಗೆ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮಕ್ಕೆ ಮುಂದಾಗಿದೆ. ಹತ್ತು ದಿನಗಳೊಳಗೆ ಸ್ಪಷ್ಟನೆ ಕೊಡದಿದ್ದಲ್ಲಿ ನಿಮ್ಮ ತಪ್ಪು ನೀವೇ ಒಪ್ಪಿಕೊಂಡಂತೆ. ನಾವು ಕ್ರಮಕ್ಕೆ ಮುಂದಾಗಲು ನಿಮ್ಮ ಒಪ್ಪಿಗೆ ಇದೆಯೆಂದು ಭಾವಿಸುತ್ತೇವೆ. ಈ ಹಿಂದೆಯೂ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ತಪ್ಪು ಸರಿಪಡಿಸಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದಿರಿ. ಆದರೆ ಯಾವುದೂ ಬದಲಾವಣೆ ಆಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹೈಕಮಾಂಡ್ ನಮ್ಮ ಪರ ಇದೆ ಎನ್ನುತ್ತಿದ್ದ ಯತ್ನಾಳ್ ತಂಡಕ್ಕೆ ಭಾರೀ ಹಿನ್ನಡೆಯಾಗಿದ್ದು, ಸದ್ಯಕ್ಕೆ ವಿಜಯೇಂದ್ರ ಮೇಲುಗೈ ಸಾಧಿಸಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ನೀಡಿದ್ದ ಬಹಿರಂಗ ಹೇಳಿಕೆಗಳ ಕುರಿತು ಹೈಕಮಾಂಡ್ ಗರಂ ಆಗಿದೆ.
ಶೋಕಾಸ್ ನೊಟೀಸ್ ಜಾರಿಯಾದ ಕಾರಣ, ಶೋಕಾಸ್ ನೊಟೀಸ್‌ಗೆ ಉತ್ತರ ಕೊಡುವುದಾಗಿ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ.
ಉತ್ತರ ಕೊಡುತ್ತೇನೆ,ಹಾಗೆಯೇ ರಾಜ್ಯ ಬಿಜೆಪಿಯ ವಸ್ತುಸ್ಥಿತಿಯನ್ನೂ ವರಿಷ್ಠರಿಗೆ ತಿಳಿಸುತ್ತೇನೆ ಎಂದು ಯತ್ನಾಳ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.