ಮೈಸೂರು: ಲೋಕಾಯುಕ್ತ ಪೊಲೀಸರು ಮುಡಾ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು ಪ್ರಕರಣದ ಎ 3 ಹಾಗೂ ಎ 4 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು.
ಲೋಕಾಯುಕ್ತ ಅಧಿಕಾರಿಗಳು ಮುಡಾ ಪ್ರಕರಣದ ಎ3 ಆರೋಪಿ ಮಲ್ಲಿಕಾರ್ಜುನ ಹಾಗೂ ಎ4 ಆರೋಪಿ ದೇವರಾಜು ಅವರಿಗೆ ನೋಟಿಸ್ ನೀಡಿ ಅ. ೧೦ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಆದ್ದರಿಂದ ಗುರುವಾರ ಮಲ್ಲಿಕಾರ್ಜುನ ಮತ್ತು ದೇವರಾಜು ನಗರದಲ್ಲಿರುವ ಲೋಕಾಯುಕ್ತ ಕಚೇರಿಗೆ ಆಗಮಿಸಿ ವಿಚಾರಣೆಗೆ ಎದುರಿಸಿದರು.
ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ದೂರುದಾರ ಸ್ನೇಹಮಯಿ ಕೃಷ್ಣ ಅವರ ವಿಚಾರಣೆಯನ್ನು ನಡೆಸಿದ್ದಾರೆ.
ಮೈಸೂರಿನ ಕೆಸರೆ ಗ್ರಾಮಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ನಗರದ ವಿಜಯನಗರದಲ್ಲಿ ನೀಡಲಾಗಿರುವ 14 ಸೈಟ್ ಇರುವ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದರು.
ಮೂಡಾ ಪ್ರಕರಣದ ತನಿಖೆಯನ್ನು ನಡೆಸಿ ಡಿಸೆಂಬರ್ ಒಳಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.