ಹುಬ್ಬಳ್ಳಿ: ಭಾರತದಲ್ಲಿ ವಕ್ಫ್ ಕಾನೂನು ತಪ್ಪಾಗಿದೆ,ಇದನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಸೂಕ್ತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆಹರೂ ಕಾಲದಲ್ಲಿ ಕಾಂಗ್ರೆಸ್ ಏಕೆ ವಕ್ಫ್ ಕಾನೂನನ್ನು ಜಾರಿಗೊಳಿಸಿತು ದೇಶದ ಯಾವ ವಿಭಾಗಗಳಿಗೂ ಇರದ ಅಧಿಕಾರವನ್ನು 2013ರಲ್ಲಿ ವಕ್ಫ್ ಮಂಡಳಿಗೆ ನೀಡಲಾಗಿದೆ ಎಂದು ಕಿಡಿಕಾರಿದರು.
ವಕ್ಫ್ ಆಸ್ತಿ ನೋಟಿಸ್ ಹಿಂದೆ ಕಾಂಗ್ರೆಸ್ ಸರ್ಕಾರ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಕುಮ್ಮಕ್ಕು ಇದೆ. ವಕ್ಫ್ ಆಸ್ತಿ ಎಂದು ರೈತರಿಗೆ ನೋಟಿಸ್ ನೀಡಿದ ತಹಶೀಲ್ದಾರ್ ಅಮಾನತಿಗೆ ವಿಜಯಪುರ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು ಮತ್ತು ಪ್ರಕರಣ ದಾಖಲಿಸಬೇಕು ಎಂದು ಜೋಶಿ ಆಗ್ರಹಿಸಿದರು.
ಭವಿಷ್ಯದಲ್ಲಿ ವಕ್ಫ್ ಬೋರ್ಡ್ ನಮ್ಮ ಮನೆಗಳು ಮತ್ತು ಜಮೀನಿನ ಮಾಲೀಕತ್ವವನ್ನು ಪಡೆದರೆ ಆಶ್ಚರ್ಯವಿಲ್ಲ. ವಕ್ಫ್ ಬೋರ್ಡ್‌ಗಳಿಗೆ ಅನಿಯಮಿತ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಇದು ಯಾವುದೇ ರೂಪದಲ್ಲಿ ಸ್ವೀಕಾರಾರ್ಹವಲ್ಲ. ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಕಾಂಗ್ರೆಸ್ ರೈತರ ಆಸ್ತಿಗಳು, ದೇವಸ್ಥಾನಗಳು, ಮಠಗಳು ಮತ್ತು ಬಡ ಮುಸ್ಲಿಮರ ಭೂಮಿಯನ್ನು ವಕ್ಫ್ ಮಂಡಳಿ ವಶಪಡಿಸಿಕೊಳ್ಳಲು ಬೆಂಬಲಿಸಿದೆ ಎಂದು ಪ್ರಹ್ಲಾದ ಜೋಶಿ ಆರೋಪಿಸಿದರು.
ಧಾರವಾಡ ಜಿಲ್ಲೆಯಲ್ಲಿ ಭೂ ದಾಖಲೆಗಳನ್ನು ತಿದ್ದುಪಡಿ ಮಾಡಿ ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಿರುವ ತಹಶೀಲ್ದಾರ್ ಹಾಗೂ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.