ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟದಲ್ಲಿ ಬಿಜೆಪಿಗೆ ಜಯ: ಆರ್‌.ಅಶೋಕ

ಬೆಂಗಳೂರು: ವಕ್ಫ್ ಮಂಡಳಿ ಹಿಂದೂಗಳು ಹಾಗೂ ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದು, ಈ ಹೋರಾಟಕ್ಕೆ ತಕ್ಕ ಮಟ್ಟಿಗೆ ಜಯ ಸಿಕ್ಕಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಬಿಜೆಪಿಯ ಹೋರಾಟಕ್ಕೆ ಮಣಿದ ಸರ್ಕಾರ ಸಮಿತಿ ರಚನೆಗೆ ತೀರ್ಮಾನಿಸಿದೆ. ಜೊತೆಗೆ ಬಾಣಂತಿಯರ ಸಾವಿನ ಪ್ರಕರಣವನ್ನೂ ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ಹತ್ತು ದಿನ ನಿಗದಿಯಾಗಿತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಇದೆ ಎಂದು ಅದನ್ನು 9 ದಿನಕ್ಕೆ ಇಳಿಕೆ ಮಾಡಲಾಯಿತು,ಹಾಗಾಗಿ ಬಿಜೆಪಿಗೆ ಹೆಚ್ಚು ಕಾಲಾವಕಾಶ ಸಿಗದಿದ್ದರೂ ಅದರಲ್ಲೇ ಸರ್ಕಾರವನ್ನು ಕಟ್ಟಿ ಹಸಕುವ ಕೆಲಸ ಮಾಡಿದ್ದೇವೆ,ಅದಕ್ಕಾಗಿ ಶಾಸಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅಶೋಕ್ ಹೇಳಿದರು.

ಕರ್ನಾಟಕದಲ್ಲಿ ವಕ್ಫ್ ವೆಬ್‌ಸೈಟ್‌ನಲ್ಲಿ 1.11 ಲಕ್ಷಕ್ಕೂ ಹೆಚ್ಚು ಎಕರೆ ಜಮೀನು ಸ್ವಾಧೀನದಲ್ಲಿದೆ ಎಂದಿದೆ. ಅದರಲ್ಲಿ 86 ಸಾವಿರ ಎಕರೆ ವಿವಾದದಲ್ಲಿದೆ. ಚಿಕ್ಕಬಳ್ಳಾಪುರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಓದಿದ ಶಾಲೆಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸಿ ಅಲ್ಲಿ ಮಸೀದಿ ಕಟ್ಟಿದ್ದಾರೆ. ರಾಷ್ಟ್ರಧ್ವಜ ಹಾರಿಸಬೇಕಾದ ಜಾಗದಲ್ಲಿ ಹಸಿರು ಧ್ವಜ ಹಾರಿಸುತ್ತಿದ್ದಾರೆ. ಬೀದರ್‌ನಲ್ಲಿ 560 ಎಕರೆ ಇರುವ ಹಳ್ಳಿಯನ್ನು ವಕ್ಫ್ ಬೋರ್ಡ್ ಆಸ್ತಿ ಮಾಡಿಬಿಟ್ಟಿದ್ದಾರೆ. ಇಷ್ಟೆಲ್ಲ ವಿಚಾರಗಳನ್ನು ಮಂಡಿಸಿದ ಬಳಿಕ ನಮ್ಮ ಹೋರಾಟಕ್ಕೆ ಮಣಿದ ಸರ್ಕಾರ, ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚಿಸುತ್ತೇವೆ ಎಂದು ಭರವಸೆ ನೀಡಿದೆ. ಇದು ಬಿಜೆಪಿಯ ಹೋರಾಟಕ್ಕೆ ಸಂದ ಜಯ ಎಂದು ಅಶೋಕ್ ತಿಳಿಸಿದರು.

ಬಾಣಂತಿಯರು ಹಾಗೂ ನವಜಾತ ಶಿಶುಗಳ ಸಾವಿಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಬಹಳಷ್ಟು ಚರ್ಚೆ ಮಾಡಿದ್ದೇವೆ. ಅವಧಿ ಮುಗಿದ ಔಷಧಿ ಬಗ್ಗೆಯೂ ದಾಖಲೆ ಕೊಟ್ಟಿದ್ದೇನೆ. ಆರೋಗ್ಯ ಸಚಿವರ ರಾಜೀನಾಮೆಗೂ ಸದನದಲ್ಲಿ ಆಗ್ರಹಿಸಿದ್ದೇವೆ. ಇದನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರ ಒಪ್ಪಿದೆ. ಇದು ಕೂಡ ವಿಧಾನಸಭೆಯಲ್ಲಿ ಬಿಜೆಪಿಯ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಸಂತೆ ಭಾಷಣ ಮಾಡುವುದನ್ನು ಬಿಡಬೇಕು. ಕಳೆದ ಅಧಿವೇಶನದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿ ಉತ್ತರ ಕರ್ನಾಟಕಕ್ಕೆ ನಾನು ಏನೇನು ಕೊಡುತ್ತೇನೆ ಎಂದು ಘೋಷಿಸಿದ್ದರು. ಬೀದರ್, ಧಾರವಾಡ, ವಿಜಯಪುರ, ಕಲ್ಬುರ್ಗಿ ಹೀಗೆ ಎಲ್ಲಾ ಜಿಲ್ಲೆಗೆ ಒಂದೊಂದು ಕೈಗಾರಿಕೆಯನ್ನು ತರುತ್ತೇನೆ ಎಂದಿದ್ದರು. ನಂಜುಡಪ್ಪ ವರದಿಯಂತೆ ಸಮಿತಿ ನೇಮಕ ಮಾಡುತ್ತೇನೆ, ಆರು ತಿಂಗಳಲ್ಲಿ ವರದಿ ನೀಡುತ್ತೇನೆ ಎಂದಿದ್ದರು. ಆದರೆ ವರ್ಷ ಕಳೆದರೂ ಇನ್ನೂ ವರದಿ ಬರಲಿಲ್ಲ. ಪ್ರವಾಸೋದ್ಯಮಕ್ಕೆ ಹಣ ಕೊಡುತ್ತೇನೆ ಎಂದು ಹೇಳಿ ಅದನ್ನೂ ಮಾಡಲಿಲ್ಲ.ಕಳೆದ ಬಾರಿ ಹೇಳಿದ್ದನ್ನೇ ಮಾಡದ ಮುಖ್ಯಮಂತ್ರಿ, ಈಗ ಮತ್ತೆ ಘೋಷಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಪೀಕರ್ ಯು.ಟಿ.ಖಾದರ್‌ ಅವರು ಅಧಿವೇಶನವನ್ನು ಇನ್ನಷ್ಟು ಚೆನ್ನಾಗಿ ನಡೆಸಬಹುದಿತ್ತು. ಅವರಿನ್ನೂ ಕಾಂಗ್ರೆಸ್ ಮನಸ್ಥಿತಿಯಲ್ಲೇ ಇದ್ದಾರೆ,ಅವರು ವಿರೋಧ ಪಕ್ಷದ ಕಡೆಗೆ ನೋಡಬೇಕು ಎಂದು ಅಶೋಕ್ ಸಲಹೆ ನೀಡಿದರು. ಶಾಸಕ ಸಿ.ಟಿ.ರವಿ ಅವರನ್ನು ಪೊಲೀಸರು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋದರು. ಸೇಫ್ಟಿ ದೃಷ್ಟಿಯಿಂದ ಕೆಲವರು ಕಾಡು, ಕ್ವಾರಿಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಪೊಲೀಸರು ಹೊಸ ಸೇಫ್ಟಿ ಮಾರ್ಗ ಹುಡುಕಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರನ್ನು ಸುರಕ್ಷತೆ ದೃಷ್ಟಿಯಿಂದ ಕಬ್ಬಿನ ಗದ್ದೆಗೆ ಅಥವಾ ಕ್ವಾರಿಗೆ ಕರೆದುಕೊಂಡು ಹೋಗಿ ಬಿಡುವುದು ಉತ್ತಮ ಎಂದು ವ್ಯಂಗ್ಯವಾಡಿದರಲ್ಲದೆ ಸಿ ಟಿ ಬಂಧನ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.