ಬೆಂಗಳೂರು: ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಪರವಾಗಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಒಳಮೀಸಲಾತಿ ಕುರಿತ ಸಚಿವ ಸಂಪುಟ ನಿರ್ಣಯಕ್ಕಾಗಿ ತಮ್ಮನ್ನು ಅಭಿನಂದಿಸಿದ ಮಾದಿಗ ಸಮುದಾಯದ ರಾಜ್ಯ ಮುಖಂಡರು, ಪ್ರತಿಷ್ಠಿತರು, ಒಳಮೀಸಲಾತಿ ಹೋರಾಟದ ನಾಯಕರು, ಪದಾಧಿಕಾರಿಗಳು ಮತ್ತು ಸಮುದಾಯದ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಸಿಎಂ ಮಾತನಾಡಿದರು.
ಒಳಮೀಸಲಾತಿಗಾಗಿ ಮಾದಿಗ ಸಮುದಾಯ ದಶಕಗಳಿಂದ ಹೋರಾಟ ನಡೆಸಿದೆ,ಈಗ ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿದೆ. ನಾವು ಜಾರಿ ಮಾಡಲೇಬೇಕಿದೆ. 101 ಪರಿಶಿಷ್ಟ ಜಾತಿಗಳಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಎಲ್ಲರನ್ನೂ ಸಮಾಧಾನ ಮಾಡುವುದು ಸಾಧ್ಯವಿಲ್ಲದಿದ್ದರೂ ಶೇ90 ರಷ್ಟು ಸಮುದಾಯಗಳಿಗೆ ಸಮಾಧಾನ ಆಗುವ ತೀರ್ಮಾನ ತೆಗೆದುಕೊಳ್ಳಬೇಕಿದೆ, ಇದನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.
ತೆಲಂಗಾಣ ಸರ್ಕಾರ ಈಗಾಗಲೇ ಒಳಮೀಸಲಾತಿ ಜಾರಿ ಸಂಬಂಧ ಒಂದು ಆಯೋಗ ರಚನೆ ಮಾಡಿದೆ. ನಾನು ತೆಲಂಗಾಣ ಸಿಎಂ ಜೊತೆಗೂ ಇತ್ತೀಚಿಗೆ ಮೈಸೂರಿನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಹರಿಯಾಣದಲ್ಲೂ ಕ್ಯಾಬಿನೆಟ್ ನಿರ್ಣಯ ಆಗಿದೆ. ಆದರೆ ಆದೇಶ ಆಗಿಲ್ಲ. ನಮ್ಮ ಕ್ಯಾಬಿನೆಟ್ ನಲ್ಲೂ ಹಿಂದೊಮ್ಮೆ ಅನೌಪಚಾರಿಕ ಚರ್ಚೆ ಮಾಡಿದ್ದೆ. ನೆನ್ನೆಯ ಕ್ಯಾಬಿನೆಟ್ ನಲ್ಲಿ ಸಚಿವ ಮಹದೇವಪ್ಪ ಒಳಮೀಸ ಲಾತಿ ವಿಚಾರ ಪ್ರಸ್ತಾಪಿಸಿದರು. ಸಚಿವರಾದ ಪ್ರಿಯಾಂಕ್ ಖರ್ಗೆ, ತಿಮ್ಮಾಪುರ,ಮುನಿಯಪ್ಪ ಅವರು ಎಲ್ಲರೂ ಮಾತನಾಡಿ ದರು. ಎಲ್ಲರೂ ಒಳ ಮೀಸಲಾತಿಗೆ ಒಪ್ಪಿಕೊಂಡರು, ಆದರೆ ಡಾಟಾ ಅಗತ್ಯವಿದೆ ಎಂಬ ಸಂಗತಿ ಕೂಡ ಚರ್ಚೆಗೆ ಬಂದಿದೆ. ಹೀಗಾಗಿ ಆಯೋಗ ರಚನೆ ಮಾಡಿದ್ದೇವೆ. ಆಯೋಗ ಎಲ್ಲ ವರದಿಗಳನ್ನೂ ಅಧ್ಯಯನ ಮಾಡಿ ಅಗತ್ಯ ಅಂಕಿ ಅಂಶ ಸಮೇತ ವರದಿ ನೀಡುತ್ತದೆ. ವರದಿ ಬರುವವರೆಗೂ ಹೊಸದಾಗಿ ಯಾವ ನೇಮಕಾತಿ ನೋಟಿಫಿಕೇಶನ್ ಹೊರಡಿಸುವುದು ಬೇಡ ಎನ್ನುವ ನಿರ್ಣಯ ಆಗಿದೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದರು.
ಸಮುದಾಯಗಳನ್ನು ಪರಸ್ಪರ ಸುಳ್ಳುಗಳ ಮೂಲಕ ಎತ್ತಿಕಟ್ಟುವ ಬಿಜೆಪಿ ಕೇಂದ್ರದಲ್ಲಿ ಏಕೆ ಎಸ್ ಸಿ ಪಿ,ಟಿ ಎಸ್ ಪಿ ಕಾಯ್ದೆ ಜಾರಿ ಮಾಡಿಲ್ಲ ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯಗಳಲ್ಲೂ ಮಾಡಲಿಲ್ಲ ಎಂದು ಟೀಕಿಸಿದರು.
ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು ಮಾತ್ರ. ಬಿಜೆಪಿಯ ಯಾವ ರಾಜ್ಯಗಳಲ್ಲೂ ಜಾರಿ ಮಾಡಿಲ್ಲ. ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಮ್ಮ ರಾಜ್ಯ ಮಾತ್ರ. ಇದು ನನ್ನ ಕಮಿಟ್ ಮೆಂಟ್, ರಾಜಕಾರಣಕ್ಕಾಗಿ ಇದೆಲ್ಲಾ ಮಾಡಿದ್ದಲ್ಲ. ಇದರ ಮುಂದುವರೆದ ಭಾಗವಾಗಿಯೇ ಒಳಮೀಸಲಾತಿ ಜಾರಿಗೆ ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಹೊಸ ಆಯೋಗದ ವರದಿ ನಿಗದಿತ ಸಮಯದೊಳಗೆ ಬರುವ ನಿರೀಕ್ಷೆ ಇದೆ. ವರದಿ ಬಂದ ತಕ್ಷಣ ಒಳ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಅಭಿನಂದನೆ ಸಲ್ಲಿಸಿದ ಮಾಜಿ ಸಚಿವ ಎಚ್. ಆಂಜನೇಯ ಅವರು,ಮಾದಿಗ ಸಮುದಾಯದ ಭಾಗ್ಯದ ಬಾಗಿಲು ತೆರೆದ ಸಿದ್ದರಾಮಯ್ಯ ಅವರ ಪರವಾಗಿ ನಮ್ಮ ಸಮುದಾಯದ ಪ್ರತಿಯೊಬ್ಬರೂ ಇರುತ್ತಾರೆ. ನಾವು ನಿಮ್ಮ ಪರವಾಗಿದ್ದೀವಿ. ಮೂರಕ್ಕೆ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ನಮ್ಮ ಸಮುದಾಯದ ಪ್ರತಿಯೊಬ್ಬರೂ ಕೆಲಸ ಮಾಡುತ್ತಾರೆ,ಚರಿತ್ರೆಯಲ್ಲಿ ಅಜರಾಮರ ಆಗಿ ಉಳಿಯುವ ಗಟ್ಟಿತನವನ್ನು ನೀವು ಪ್ರದರ್ಶಿಸಿದ್ದೀರಿ. ನಿಮಗೆ ಸಾವಿರ ವಂದನೆಗಳು ಎಂದು ತಿಳಿಸಿದರು.
ಆರ್.ಬಿ.ತಿಮ್ಮಾಪುರ್ ಅವರು ಮಾತನಾಡಿ,
ಒಳಮೀಸಲಾತಿ ಹೋರಾಟಕ್ಕೆ ನಿನ್ನೆ ಚರಿತ್ರಾರ್ಹ ದಿನ. ಇದು ಸಾಧ್ಯವಾಗಿದ್ದು ಸಿಎಂ ಸಿದ್ದರಾಮಯ್ಯ ಅವರಿಂದ. ನೀವು ಮಾಡದಿದ್ದರೆ ಬಿಜೆಪಿಯವರಾಗಲಿ, ಉಳಿದ ಯಾರೇ ಆಗಲಿ ಈ ಗಟ್ಟಿತನ ತೋರಿಸುತ್ತಿರಲಿಲ್ಲ ಒಳ ಮೀಸಲಾತಿ ಜಾರಿ ಮಾಡುತ್ತಿರಲಿಲ್ಲ ಎಂದು ನುಡಿದರು.
ಎಲ್.ಹನುಮಂತಯ್ಯ ಅವರು ಮಾತನಾಡಿ,
ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹು ಮಹಾರಾಜ್ ಮತ್ತು ನಾಲ್ವಡಿ ಅರಸರ ಪರಂಪರೆಯವರು ಅದಕ್ಕೇ ಇದು ಸಾಧ್ಯವಾಗಿದೆ ಎಂದು ಬಣ್ಣಿಸಿದರು.