ವಿಕಲಚೇತನರ ಸಬಲೀಕರಣಕ್ಕೆ ಸರ್ಕಾರ ಬದ್ದ-ಸಿದ್ದರಾಮಯ್ಯ

ಬೆಂಗಳೂರು: ವಿಕಲಚೇತನರ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಪೂರಕ ಅಂದಾಜಿನಲ್ಲಿ 44 ಕೋಟಿ ರೂ ಮಂಜೂರು ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಮಂಗಳವಾರ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಶ್ರೀ ಕಂಠೀರವ ಒಳಾoಗಣ ಕ್ರೀಡಾಂಗಣ ದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸುಮಾರು 15 ಲಕ್ಷ ವಿಕಲಚೇತನರಿದ್ದಾರೆ. ಇವರೆಲ್ಲರ ಆರೈಕೆ ಮಾಡಿ ವಿಶೇಷ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯ. ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ , ಉದ್ಯೋಗ ಪಡೆಯುವಂತಹ ಅವಕಾಶವನ್ನು ಕಲ್ಪಿಸಿದೆ. ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ. ಅವರು ಸಮಾಜದ ಆಸ್ತಿ, ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಪಾರಾ ಒಲಂಪಿಕ್ಸ್ ನಲ್ಲಿ ಭಾರತದ ವಿಕಲಚೇತನ ಕ್ರೀಡಾಪಟುಗಳು ಹೆಚ್ಚಿನ ಪದಕಗಳನ್ನು ಪಡೆದಿರುವುದು ಹೆಮ್ಮೆಯ ವಿಚಾರ ಎಂದು ಸಂತಸ ಪಟ್ಟರು.

ನಮ್ಮ ಸರ್ಕಾರ ಈ ಬಾರಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವದ ಉತ್ತೇಜನ ಎಂಬ ಘೋಷ ವಾಕ್ಯದೊಂದಿಗೆ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಈ ವರ್ಷ ನಾಲ್ಕು ಬಗೆಯ ವಿಕಲಚೇತನರ ಆರೈಕೆದಾರರಿಗೆ ಪ್ರತಿ ಮಾಹೆ 1000 ರೂ. ಆರೈಕೆದಾರರ ಭತ್ಯೆ ನೀಡುವ ಯೋಜನೆಯನ್ನು ದೇಶದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯ ಘೋಷಿಸಿ ಪ್ರಸಕ್ತ ಸಾಲಿನಿಂದ ನೀಡಲಾಗುವುದು ಎಂದು ಸಿಎಂ ತಿಳಿಸಿದರು.

ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ ಅವಲಂಬಿತರಿಗೆ ನೀಡಲಾಗುವ ಮರಣ ಪರಿಹಾರ ನಿಧಿಯನ್ನು 2023ನೇ ಸಾಲಿನಲ್ಲಿ 50,000 ರೂ ದಿಂದ ಪರಿಷ್ಕರಿಸಿ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸರ್ಕಾರಿ ಉದ್ಯೋಗಗಳಲ್ಲಿ ‘ಸಿ’ ಮತ್ತು ‘ಡಿ’ ಸಮೂಹದ ಹುದ್ದೆಗಳಲ್ಲಿ ಶೇ.5 ಹಾಗೂ ‘ಎ’ ಮತ್ತು ‘ಬಿ’ ಹುದ್ದೆಗಳಲ್ಲಿ ಶೇ.4ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಅಲ್ಲದೇ ಇವರು ನಿರ್ವಹಿಸಬಹುದಾದಂತಹ ಹುದ್ದೆಗಳನ್ನು ಗುರುತಿಸಲು ರಾಜ್ಯ ಮಟ್ಟದಲ್ಲಿ ತಜ್ಞರ ಸಮತಿಯನ್ನು ರಚಿಸಲಾಗಿದ್ದು ಇಲಾಖೆಗಳಲ್ಲಿನ ಹುದ್ದೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ವಿಕಲಚೇತನರ ಅನುಕೂಲಕ್ಕಾಗಿ ವಾಹನಗಳನ್ನು ನೀಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಸಾಮಾಜಿಕ ಸಬಲೀಕರಣಕ್ಕಾಗಿ ಶೇಕಡಾ 40 ರಿಂದ 74 ವಿಕಲಚೇತನರಿಗೆ ರೂ. 800 ಹಾಗೂ ಶೇ 75ಮತ್ತು ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯತೆವುಳ್ಳವರಿಗೆ ರೂ. 1400 ಮತ್ತು ತೀವ್ರತರನಾದ ಮನೋವೈಕಲ್ಯತೆ ಇರುವ ವ್ಯಕ್ತಿಗಳಿಗೆ ರೂ. 2000 ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ನೀಡಲಾಗುವ ವಿಕಲಚೇತನರ ಮಾಸಾಶನ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಪತ್ರ ಬರೆಯಲು ಕ್ರಮ ಕೈಗೊಳ್ಳಲಾಗುವುದು ವಿಕಲಚೇತನರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.