ವೈಜಾಗ್ ಸ್ಟೀಲ್ ಪುನಚ್ಚೇತನ: ನಿರ್ಮಲಾ, ಚಂದ್ರಬಾಬು ನಾಯ್ಡು ಜತೆ ಹೆಚ್.ಡಿ.ಕೆ ಚರ್ಚೆ

ಬೆಂಗಳೂರು: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಉಕ್ಕು ಕಾರ್ಖಾನೆ ವೈಜಾಗ್ ಸ್ಟೀಲ್ ಅನ್ನು ಪುನರುದ್ಧಾರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಹತ್ವದ ಸಭೆ ನಡೆಸಿದರು.

ಕುಮಾರಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಮಂಗಳವಾರ‌ ತಡರಾತ್ರಿ ಮಹತ್ವದ ಸಮಾಲೋಚನೆ ನಡೆಸಿದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಆರ್’ಐಎನ್’ಎಲ್ ಅನ್ನು ಉಳಿಸುವ ನಿಟ್ಟಿನಲ್ಲಿ ಕಂಡುಕೊಳ್ಳಬೇಕಾದ ಪರಿಹಾರೋಪಾಯಗಳು, ಮಾರ್ಗಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ತಾವು ಖುದ್ದು ಕಾರ್ಖಾನೆಗೆ ಭೇಟಿ ನೀಡಿ ಸಂಗ್ರಹಿಸಿದ್ದ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡ ಹೆಚ್ ಡಿ ಕೆ  ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಮುಖಂಡರು, ಆಡಳಿತ ಮಂಡಳಿ, ಸ್ಥಳೀಯ ಜನಪ್ರತಿನಿಧಿಗಳು ನೀಡಿದ್ದ ಮಾಹಿತಿ ವಿವರಿಸಿದರು.

ವೈಜಾಗ್ ಸ್ಟೀಲ್ ಉಳಿಸುವ ನಿಟ್ಟಿನಲ್ಲಿ ಹಣಕಾಸು ಸಚಿವರು ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಫಲಪ್ರದ ಮಾತುಕತೆ ನಡೆಯಿತು. ಈಗಾಗಲೇ ನಾನು ಕಾರ್ಖಾನೆಗೂ ಭೇಟಿ ನೀಡಿದ್ದೆ ಹಾಗೂ ವಿತ್ತ ಸಚಿವರ ಜತೆಯೂ ಚರ್ಚೆ ನಡೆಸಿದ್ದೆ. ಅಲ್ಲದೆ; ಸಚಿವಾಲಯದ ಮಟ್ಟದಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿತ್ತು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.