ಸಂವಿಧಾನ ನನಗೆ ಎಲ್ಲವನ್ನೂ ಕೊಟ್ಟಿದೆ -ದೇವೇಗೌಡರ ಬಾವುಕ ನುಡಿ

ನವದೆಹಲಿ: ಅತ್ಯಂತ ಬಡ ರೈತನ ಮಗನಾದ ನನಗೆ ಈ ದೇಶದ ಸಂವಿಧಾನ ಎಲ್ಲವನ್ನೂ ಕೊಟ್ಟಿದೆ ಎಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭಾವುಕರಾಗಿ ನುಡಿದರು.

ಭಾವಪೂರ್ಣವಾಗಿ ಮಾತನಾಡಿದ ಮಾಜಿ ದೇವೇಗೌಡರು, ಸಂವಿಧಾನದ ಬಲದಿಂದಲೇ ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವಂತೆ ಆಯಿತು ಎಂದು ಸ್ಮರಿಸಿದರು.

ಸಂವಿಧಾನವನ್ನು ಅಳವಡಿಸಿಕೊಂಡ 75 ವರ್ಷಗಳ ಸಂದರ್ಭದ ಪ್ರಯುಕ್ತ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಅವರು,  ನಾನು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಲು ಸಾಧ್ಯವಾಗಿದ್ದರೆ ಅದು ನಮ್ಮ ಸಂವಿಧಾನದಿಂದ ಮಾತ್ರ ಎಂದು ಹೇಳಿದರು.

ಕಳೆದ 75 ವರ್ಷಗಳ ಅವಧಿಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಭಾರತದ ಬೆಳೆದ ರೀತಿ, ಮಾಡಿದ ಸಾಧನೆಗಳ ಬಗ್ಗೆ ಮಹತ್ವಪೂರ್ಣ ಅಂಶಗಳನ್ನು ತಿಳಿಸಿದರು.

ಆಧುನಿಕ ಭಾರತವನ್ನು ರೂಪಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಸಂವಿಧಾನ ಅಸಾಧಾರಣ ಕೊಡುಗೆ ನೀಡಿದೆ. ಬಾಬಾ ಸಾಹೇಬರ ನೇತೃತ್ವದಲ್ಲಿ ರಚನೆಯಾದ ನಮ್ಮ ಸಂವಿಧಾನವು ಅನೇಕ ಒತ್ತಡಗಳು ಮತ್ತು ನಮ್ಮ ಕಾಲದ ರಾಜಕೀಯವನ್ನು ತಡೆದುಕೊಂಡು ನಿಂತಿದೆ ಎಂದು ಹೇಳಿದರು.

ತುರ್ತು ಪರಿಸ್ಥಿತಿ ಸಂದರ್ಭವನ್ನು ನೆನಪು ಮಾಡಿಕೊಂಡ ಮಾಜಿ ಪ್ರಧಾನಿಗಳು, ತುರ್ತು ಪರಿಸ್ಥಿತಿಯ ಕಾಲ ಕರಾಳ ಅವಧಿ, ಈ ರಾಷ್ಟ್ರದ ಬಹುತೇಕ ರಾಜಕೀಯ ವಿರೋಧಿಗಳೆಲ್ಲರೂ ಜೈಲು ಪಾಲಾದರು. ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದವರನ್ನೆಲ್ಲ ಜೈಲಿಗೆ ಕಳುಹಿಸಲಾಯಿತು ಎಂದು ತಿಳಿಸಿದರು.

ನನ್ನನ್ನೂ ಜೈಲಿಗೆ ಕಳುಹಿಸಲಾಯಿತು,ನನ್ನ ಸೆರೆವಾಸವು ನನ್ನ ತಂದೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಕುಟುಂಬದ ಮೇಲೆ ಮಾನಸಿಕ ಒತ್ತಡ ಉಂಟು ಮಾಡಿತು. ಅದೇ ನೋವಿನಲ್ಲೇ ತಂದೆಯವರು ವಿಧಿವಶರಾದರು ಎಂದು ದೇವೇಗೌಡರು ಭಾವುಕರಾದರು.

ನಮ್ಮ ಸಂವಿಧಾನ ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು. ಅಂತಹ ಮಹೋನ್ನತ ಸಂವಿಧಾನವನ್ನು ನಾವು ಹೊಂದಿದ್ದೇವೆ ಎಂದು ದೇವೇಗೌಡರು ಬಣ್ಣಿಸಿದರು.

ನಾನು ಮೊದಲ ಬಾರಿಗೆ 13 ಪಕ್ಷಗಳ ಒಕ್ಕೂಟವನ್ನು ಮುನ್ನಡೆಸಿದ್ದೇನೆ. ಆ ಸರಕಾರದ ಆರ್ಥಿಕ ಸಾಧನೆಯ ಪ್ರಜಾಪ್ರಭುತ್ವದೆಡೆಗಿನ ಹೆಗ್ಗುರುತುಗಳನ್ನು ಗಮನಿಸಿದರೆ ನಮ್ಮ ಸಂವಿಧಾನದ ಶಕ್ತಿ ಎಂತದ್ದು ಎನ್ನುವುದು ಅರ್ಥವಾಗುತ್ತದೆ. ನಾನು ಅನುಸರಿಸಿದ ಸರಳ ನಿಯಮವೆಂದರೆ, ನೀವು ಸಂವಿಧಾನವನ್ನು ನಿಕಟವಾಗಿ ಮತ್ತು ನಿಷ್ಠೆಯಿಂದ ಅನುಸರಿಸಿದರೆ, ನಾವು ದೊಡ್ಡ ತಪ್ಪುಗಳನ್ನು ತಪ್ಪಿಸಬಹುದು ಎಂದು ‌ದೇವೇಗೌಡರು ಅಭಿಪ್ರಾಯ ಪಟ್ಟರು.

ಸಂವಿಧಾನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಲು ನಿರಂತರ ಪ್ರಯತ್ನಗಳು ನಡೆಯಬೇಕು ಎಂದು ಕರೆ ನೀಡಿದರು.

ನಾವು ನಮ್ಮ ಸಂವಿಧಾನ ಅಳವಡಿಸಿಕೊಂಡ  ಶತಮಾನೋತ್ಸವವನ್ನು ಆಚರಿಸೋಣ ಮತ್ತು ಈ ರಾಷ್ಟ್ರದ ಭವ್ಯ ಭವಿಷ್ಯದಲ್ಲಿ ಅದರ ಅನೇಕ ಶತಮಾನಗಳನ್ನು ಆಚರಿಸೋಣ ಎಂದು ತಿಳಿಸಿದರು.