ಸಿಎಂ ವಿರುದ್ಧದ ಜನಾರ್ಧನ ರೆಡ್ಡಿ ಹೇಳಿಕೆಗೆ ಮಾಜಿ ಮೇಯರ್ ಪುರುಷೋತ್ತಮ್ ಕಿಡಿ

ಮೈಸೂರು: ಮಹಿಷಾ ದಸರಾ ಆಚರಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಬಂದಿದೆ ಎಂಬ ಶಾಸಕ ಜನಾರ್ಧನ ರೆಡ್ಡಿ ಹೇಳಿಕೆಗೆ ಮಾಜಿ ಮೇಯರ್ ಹಾಗೂ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮೈಸೂರಿನ ಶೂರನನ್ನು ಪರಿಚಯಿಸಿದ್ದೇವೆ,ಮೌಢ್ಯ ತುಂಬಿ ಮಾತನಾಡುವುದು ಸರಿಯಲ್ಲ, ಭೂಮಿಯ ಸಂಪತ್ತನ್ನು ದೇಶ ವಿದೇಶಕ್ಕೆ ಮಾರಾಟ ಮಾಡಿ ಆ ಹಣದ ಮೂಲಕ ಜನರಿಂದ ಮತ ಹಾಕಿಸಿ ರಾಜ್ಯದ ಪ್ರತಿನಿಧಿಯಾಗಿದ್ದಾರೆ ಎಂದು ಜನಾರ್ದನ ರೆಡ್ಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಹಿಷಾ ದಸರಾವನ್ನು 10 ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿದೆ, ಸಿದ್ದರಾಮಯ್ಯ ಅವರಿಗೆ ಒತ್ತಡ ಇದ್ದರೂ ಸವಾಲನ್ನು ಎದುರಿಸುತ್ತಿದ್ದಾರೆ, ಅಂತಹವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹನಕೆರೆಯಲ್ಲಿ ಭೈರವೇಶ್ವರ ಉತ್ಸವದಲ್ಲಿ ದೇವರ ಹೆಸರಿನಲ್ಲಿ ಅಸ್ಪೃಶ್ಯತೆ ಮಾಡಲಾಗಿದೆ. ಇಲಾಖೆಗಳಲ್ಲಿ ಮೀಟಿಂಗ್ ಮಾಡಿದ್ದರೂ ಶೋಷಣೆ ಮಾಡಿದ್ದಾರೆ, ದೇವಾಲಯಕ್ಕೆ ಹೋಗಲು ಸ್ವಾತಂತ್ರ್ಯವಿಲ್ಲವೇ, ಹಿಂದೂ ಸಂಘಟನೆಯವರು ಯಾಕೆ ಮಾತನಾಡುತ್ತಿಲ್ಲ ಎಂದು ಪುರುಷೋತ್ತಮ್ ಪ್ರಶ್ನಿಸಿದರು.

ಒಳಮೀಸಲಾತಿಯ ವಿಚಾರದಲ್ಲಿ ಎಡ, ಬಲ ಸಂಘರ್ಷ ಹೆಚ್ಚುತ್ತಿದೆ‌. ಇದು ಹೆಚ್ಚಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮರಸ್ಯದಿಂದ ಮುಖಂಡರು ಮಾತನಾಡಿ ಸಹಬಾಳ್ವೆ ನಡೆಸುವುದು ಶ್ರೇಯಸ್ಸು ಎಂದು ಹೇಳಿದರು.

ನಂತರ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ.ಭಗವಾನ್ ಅವರು, ಸಿದ್ದರಾಮಯ್ಯ ಅವರ ಶ್ರೇಯಸ್ಸು ಸಹಿಸದ ಜನರು ಆರೋಪ ಮಾಡುತ್ತಾರೆ. ಆದರೆ ಅದು ಯಾವುದೂ ಸಾಬೀತಾಗಿಲ್ಲ,ಸುಳ್ಳು ಆರೋಪ ಮಾಡಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಮಹಿಷಾಪುರ ಮೈಸೂರಾಗಿದೆ. ವ್ಯಕ್ತಿ ಕೆಟ್ಟವನಾಗಿದ್ದರೆ ವಾಸ ಮಾಡುವ ನಗರಕ್ಕೆ ಅವನ ಹೆಸರು ಇಡುತ್ತಾರೆಯೆ, ಮಹಿಷ ದಸರಾದ ಮೇಲಿನ ಆರೋಪ ಅನಾವಶ್ಯಕ, ಖಂಡನೀಯ ಎಂದು ಅಸಮಧಾನ ವ್ಯಕ್ತಪಡಿಸಿದರು.