ಸಿಎಂ ಸ್ವಕ್ಷೇತ್ರದ ಮೇಲೂ ವಕ್ಫ್ ಕಣ್ಣು

ಮೈಸೂರು: ಸಿಎಂ ಸ್ವಕ್ಷೇತ್ರದಲ್ಲೂ ಸ್ಮಶಾನದ ಜಾಗದ ಮೇಲೆ ವಕ್ಫ್ ಕಣ್ಣು ಬಿದ್ದಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ವರುಣಾ ಕ್ಷೇತ್ರ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಸರ್ವೇ ನಂಬರ್ 257ರ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ.

ಮುಸ್ಲಿಮರ ಖಬ್ರಸ್ಥಾನ ಎಂದು ಇತ್ತೀಚಿನ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಈ ಮೊದಲು ಅಂದರೆ 2019-20 ರ ಪಹಣಿಯಲ್ಲಿ ಕಪನಯ್ಯತೋಪು ಎಂದು ನಮೂದಿಸಲಾಗಿತ್ತು. ಅಲ್ಲದೇ ಹಿಂದೂ ಸಮುದಾಯದ ರುದ್ರಭೂಮಿಯಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಹಿಂದೂ ಸಮುದಾಯದ ಪುರಾತನ ಸಮಾಧಿಗಳು ಇಲ್ಲಿವೆ.

ಆದರೆ ಈ ಜಾಗದ ಈಗಿನ ಪಹಣಿಯಲ್ಲಿ ಸುನ್ನಿವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಕಾವೇರಿ ನದಿ ತೀರದಿಂದ ಕೇವಲ 200 ಮೀಟರ್ ಅಂತರದಲ್ಲಿರುವ ಜಾಗ ಇದು. ರಂಗಸಮುದ್ರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಘಟಕವೂ ಇದೇ ಸ್ಥಳದಲ್ಲಿದೆ. ಈ ಜಾಗವನ್ನು ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.