ಸಿದ್ದರಾಮಯ್ಯ ಅನ್ನಭಾಗ್ಯದ ಬದಲು ಕನ್ನಭಾಗ್ಯ ಕೊಟ್ಟಿದ್ದಾರೆ:ಅಶೋಕ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಎಂದು ಹೇಳಿ ಕನ್ನಭಾಗ್ಯ ಕೊಟ್ಟಿದ್ದಾರೆ, ಅನ್ನವನ್ನು ಕದ್ದು ಲಕ್ಷಾಂತರ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದರು.

ಬೆಂಗಳೂರಿನ ಜಯನಗರದ ಅರಸು ಕಾಲೋನಿಯಲ್ಲಿ ರೇಷನ್‌ ಕಾರ್ಡ್‌ ರದ್ದುಗೊಂಡ ಕುಟುಂಬದವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅಶೋಕ್,

ಸದನ ಆರಂಭವಾಗುವ ಮುನ್ನ ಜನರಿಗೆ ರೇಷನ್‌ ಕಾರ್ಡ್‌ ವಾಪಸ್‌ ನೀಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಿ ವಿಧಾನಸೌಧಕ್ಕೆ ಬೀಗ ಹಾಕುತ್ತೇವೆ ಎಂದು  ಎಚ್ಚರಿಸಿದರು.

ಅರಸು ಕಾಲೋನಿಯಲ್ಲಿ 45 ವರ್ಷದಿಂದ ರೇಷನ್‌ ಕಾರ್ಡ್‌ ಹೊಂದಿದ್ದ ವೃದ್ಧೆ, ಈಗ ಅರ್ಹತೆ ಕಳೆದುಕೊಂಡಿದ್ದಾರೆ. ಅಂಕಿ ಅಂಶದ ಪ್ರಕಾರ, 250 ಸರ್ಕಾರಿ ನೌಕರರ ಬಳಿ ರೇಷನ್‌ ಕಾರ್ಡ್‌ ಇದ್ದರೂ, 12 ಲಕ್ಷ ಜನರ ಕಾರ್ಡ್‌ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಏನೂ ಭಯ ಬೇಡವೆಂದು ಸಿಎಂ ಸಿದ್ದರಾಮಯ್ಯ ಹೇಳಿದರೆ, ಆಹಾರ ಸಚಿವರು ಮತ್ತೆ ಅರ್ಜಿ ಹಾಕಿ ಎಂದು ಹೇಳುತ್ತಾರೆ. ಕಾಂಗ್ರೆಸ್‌ ನಾಯಕರು ತಪ್ಪು ಮಾಡಿದ ಮೇಲೆ ಜನರು ಯಾಕೆ ಮರಳಿ ಅರ್ಜಿ ಹಾಕಬೇಕು ಎಂದು ಪ್ರಶ್ನಿಸಿದರು.

ಮರಳಿ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಒಂದು ಕಾರ್ಡ್‌ಗೆ 10-15 ಸಾವಿರ ರೂ. ಲಂಚ ನೀಡಬೇಕಾಗುತ್ತದೆ. ಯಾರೂ ಅರ್ಜಿ ಹಾಕಬಾರದು, ಸರ್ಕಾರವೇ ಮರಳಿ ರೇಷನ್‌ ಕಾರ್ಡ್‌ ಕೊಡಬೇಕು. ದೇವಸ್ಥಾನದ ಮುಂದೆ ಹೂ ಮಾರುವವರು, ಸೊಪ್ಪು ಮಾರುವವರ ರೇಷನ್‌ ಕಾರ್ಡ್‌ ರದ್ದುಪಡಿಸಲಾಗಿದೆ. ಇದರ ವಿರುದ್ಧ ಸದನದಲ್ಲಿ ಹಾಗೂ ಹೊರಗೆ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಏಕಾಏಕಿ ರೇಷನ್‌ ಕಾರ್ಡ್‌ ರದ್ದು ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಖಾಲಿಯಾಗಿದ್ದು, ರಸ್ತೆ ಗುಂಡಿ ಮುಚ್ಚಲು ಕೂಡ ಹಣವಿಲ್ಲ. 20-30 ಸಾವಿರ ಕೋಟಿ ರೂ ಉಳಿಸಿ, ಶಾಸಕರ ಬಂಡಾಯ ಶಮನಕ್ಕೆ ಬಳಸಲಾಗುತ್ತಿದೆ ಎಂದು ಅಶೋಕ್ ದೂರಿದರು. 

ಸಚಿವರ ಮನೆ ಆಧುನೀಕರಣಕ್ಕೆ 40-50 ಕೋಟಿ ರೂ., ಸಿಎಂ ಮನೆ ನವೀಕರಣಕ್ಕೆ 2 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಬಡ ಜನರಿಗೆ ಅಕ್ಕಿ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಕೆ.ರಾಮಮೂರ್ತಿ ಹಾಜರಿದ್ದರು.