ಸಿ.ಟಿ.ರವಿಗೆ ರಕ್ಷಣೆ ನೀಡಲು ರಾಜ್ಯಪಾಲರಿಗೆ ಬಿಜೆಪಿ ಮನವಿ

ಬೆಂಗಳೂರು: ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರಿಗೆ ರಕ್ಷಣೆ ನೀಡುವಂತೆ ಕೋರಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ.

ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್,ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕೆಂಬುದು ನಮ್ಮ ಆಗ್ರಹ ಎಂದು ಹೇಳಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ ಶಾಸಕ ಸಿ.ಟಿ.ರವಿ ಅವರಿಗೆ ಮಾಡಿದ ಅಪಮಾನದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದರು.

ಸಿ.ಟಿ.ರವಿ ಅವರಿಗೆ ಮುಸ್ಲಿಂ ಉಗ್ರವಾದಿ ಹಾಗೂ ನಕ್ಸಲರಿಂದ ಬೆದರಿಕೆ ಇದೆ. ಹೀಗಿದ್ದರೂ ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿರುವುದು ಅನುಮಾನ ತಂದಿದೆ ಎಂದು ತಿಳಿಸಿದರು ‌

ಒಬ್ಬ ಪೊಲೀಸ್‌ ಅಧಿಕಾರಿ ಸುರಕ್ಷತೆ ದೃಷ್ಟಿಯಿಂದ ಅವರನ್ನು ಗದ್ದೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ ಅಂದರೆ ಪೊಲೀಸ್‌ ಠಾಣೆ ಸುರಕ್ಷಿತವಲ್ಲ ಎಂದರ್ಥ. ಪೊಲೀಸ್‌ ಠಾಣೆ ಸುರಕ್ಷಿತವಲ್ಲ ಎಂಬುದನ್ನು ಈ ಸರ್ಕಾರ ಜನರಿಗೆ ತಿಳಿಸಿದೆ ಎಂದು ಟೀಕಿಸಿದರು.

ಸಿ.ಟಿ.ರವಿ ಅವರಿಗೇ ಹೀಗಾದರೆ ಇನ್ನು ಸಾರ್ವಜನಿಕರ ಪಾಡೇನು ಎಂಬ ಪ್ರಶ್ನೆ ಕಾಡುತ್ತಿದೆ. ಇದು ರಾಜ್ಯ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆ, ಅದಕ್ಕಾಗಿ ರಾಜ್ಯಪಾಲರು ಸಂವಿಧಾನವನ್ನು ರಕ್ಷಣೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಸಿ.ಟಿ.ರವಿ ಎಲ್ಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರಶ್ನಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಸುರಕ್ಷತೆಯ ಕಾರಣ ನೀಡುತ್ತಾರೆ. ಇದೊಂದು ಬಫೂನ್‌ ಸರ್ಕಾರ, ಇಷ್ಟು ಕೆಟ್ಟದಾಗಿ ಯಾರೂ ಸರ್ಕಾರ ನಡೆಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪೊಲೀಸ್‌ ಆಯುಕ್ತರಿಗೆ ನಿರಂತರವಾಗಿ ಫೋನ್‌ ಕರೆ ಬರುತ್ತಿತ್ತು. ಇವರಿಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಕರೆ ಮಾಡುತ್ತಿದ್ದರೇ ಎಂಬ ಅನುಮಾನ ಇದೆ ಸತ್ಯ ಗೊತ್ತಾಗಬೇಕು. ಇದರ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಅಶೋಕ್ ಆಗ್ರಹಿಸಿದರು.

ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಯಾಗಿ ಬದಲಾಗಿದೆ. ಎಲ್ಲ ತನಿಖೆಯನ್ನು ಪೊಲೀಸರೇ ಮಾಡುತ್ತಾರೆ ಎಂದರೆ ಸಿಒಡಿಗೆ ಕೊಟ್ಟರೂ ಮತ್ತೊಬ್ಬರಿಗೆ ಕೊಟ್ಟರೂ ಒಂದೇ. ಪೊಲೀಸರು ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಅದಕ್ಕಾಗಿ ನ್ಯಾಯಾಂಗ ತನಿಖೆ ಆಗಬೇಕು. ನ್ಯಾಯಾಂಗ ತನಿಖೆಯಲ್ಲಿ ಯಾವುದೇ ತೀರ್ಪು ಬಂದರೂ ನಾವು ಒಪ್ಪಿಕೊಳ್ಳುತ್ತೇವೆ ಎಂದು ಅಶೋಕ್ ತಿಳಿಸಿದರು.