ಹಣ ಕೊಡುವಂತೆ ಉದ್ಯಮಿಯೊಬ್ಬರಿಗೆ ಜೈಲಿನಿಂದಲೇ ರೌಡಿ ಶೀಟರ್ ಆವಾಜ್

ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಹಣ ಕೊಡುವಂತೆ ರೌಡಿ ಶೀಟರ್ ಒಬ್ಬ ಜೈಲಿನಿಂದಲೇ ಆವಾಜ್ ಹಾಕಿರುವ ಪ್ರಕರಣ ನಡೆದಿದೆ.

ರೌಡಿಶೀಟರ್ ಮಂಜೇಶ್ ಸೇರಿದಂತೆ ನಾಲ್ವರ ವಿರುದ್ದ ರಿಯಲ್ ಎಸ್ಟೇಟ್ ಉದ್ಯಮಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರೌಡಿಶೀಟರ್ ಮಂಜೇಶ್ ಹಾಗೂ ಆತನ ಸ್ನೇಹಿತರಾದ ಚಂದ್ರಶೇಖರ್,ಅನಿಲ್ ಹಾಗೂ ಸುರೇಶ್ ವಿರುದ್ದ ರಿಯಲ್ ಎಸ್ಟೇಟ್ ಉದ್ಯಮಿ ಹೆಬ್ಬಾಳದ ನಿವಾಸಿ ರಾಜೇಂದ್ರ ರಾವ್ ದೂರು ನೀಡಿದ್ದಾರೆ.

ರಾಜೇಂದ್ರ ರಾವ್ ಹಾಗೂ ಚಂದ್ರಶೇಖರ್ ಮತ್ತು ಮಹದೇವು ಎಂಬುವರ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಇತ್ತು.ಇದೇ ವ್ಯವಹಾರದ ವಿಚಾರದಲ್ಲಿ ರಾಜೇಂದ್ರ ರಾವ್ ರವರು ಚಂಧ್ರಶೇಖರ್ ಗೆ ಹಣ ನೀಡಬೇಕಿತ್ತು.

ಹಂತ ಹಂತವಾಗಿ ಚಂಧ್ರಶೇಖರ್ ಗೆ 27 ಲಕ್ಷ ಪಾವತಿಸಿದ್ದಾರೆ.ಆದರೂ ಇನ್ನೂ 40 ಲಕ್ಷ ಕೊಡಬೇಕೆಂದು ಕಾರಣ ನೀಡಿ ಚಂದ್ರಶೇಖರ್ ಯುವಕರನ್ನ ಕರೆತಂದು ಧಂಕಿ ಹಾಕಿದ್ದಾರೆ.

ಈ ಪೈಕಿ ಒಬ್ಬ ತಾನು ರೌಡಿ ಮಂಜೇಶ್ ಕಡೆಯವನು ಹಣ ಕೊಡದಿದ್ದಲ್ಲಿ ಬದುಕಲು ಬಿಡುವುದಿಲ್ಲ ಎಂದು ಜೋರು ಮಾಡಿದ್ದಾನೆ.ಅಲ್ಲದೆ ತನ್ನ ಫೋನ್ ಮುಖಾಂತರ ಜೈಲಿನಲ್ಲಿರುವ ಮಂಜೇಶ್ ಸಂಪರ್ಕಿಸಿ ಆತನಿಂದಲೂ ಧಂಕಿ ಹಾಕಿಸಿದ್ದಾನೆ.

ಮೊಬೈಲ್ ನಲ್ಲಿ ಮಾತನಾಡಿದ ಮಂಜೇಶ್ 40 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದಾನೆ.ಹಣ ಕೊಡದಿದ್ದಲ್ಲಿ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವ ಚಂದ್ರಶೇಖರ್,ಮಂಜೇಶ್,ಅನಿಲ್ ಹಾಗೂ ಸುರೇಶ್ ಎಂಬುವರ ವಿರುದ್ದ ಕಾನೂನು ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡುವಂತೆ ರಾಜೇಂದ್ರ ರಾವ್ ಹೆಬ್ಬಾಳ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪೊಲೀಸರು ಈ ಸಂಬಂಧ ಎಫ್.ಐ.ಆರ್. ದಾಖಲಿ ಸಿದ್ದಾರೆ.