ಬೆಂಗಳೂರು: ಯಾರದ್ದೋ ಸೂಚನೆ ಮೇರೆಗೆ ನನ್ನ ಹತ್ಯೆ ಮಾಡಲು ಗದ್ದೆ, ಕಲ್ಲಿನ ಕ್ವಾರಿ, ಗಲ್ಲಿ ರಸ್ತೆಗಳಲ್ಲಿ ಪೊಲೀಸರು ಸುತ್ತಾಡಿಸಿದ್ದರು ಎಂದು ಬಿಜೆಪಿ ಎಂ ಎಲ್ ಸಿ ಸಿ.ಟಿ ರವಿ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣ ಸೌಧದ ಒಳಗಡೆಯೇ ನಿನ್ನ ಹೆಣ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಅಷ್ಟೊಂದು ಭದ್ರತೆ ಇರುವ ಜಾಗದಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು, ಗುಂಪಿನಿನಿಂದ ಹತ್ಯೆ ಮಾಡಿಸಲೆಂದೇ ನನ್ನನ್ನು ಗಲ್ಲಿ, ಗದ್ದೆಯಲ್ಲಿ ಸುತ್ತಾಡಿಸಿದ್ದಾರೆ ಎಂದು ಸಿ.ಟಿ ರವಿ ಹೇಳಿದರು.
ಪರಿಷತ್‌ನಲ್ಲಿ ಅಂಬೇಡ್ಕರ್ ವಿಚಾರದ ಬಗ್ಗೆ ಚರ್ಚೆ ಜೋರಾದ ಕಾರಣ ಕಲಾಪ ಮುಂದೂಡಿಕೆ ಆಯ್ತು. ನಂತರ ನಾನು ಪಶ್ಚಿಮ ದ್ವಾರಕ್ಕೆ ಬಂದು ಕಾಂಗ್ರೆಸ್ ಯಾವ ರೀತಿ ಅಂಬೇಡ್ಕರ್‌ಗೆ ಅವಮಾನ ಮಾಡಿದೆ ಎಂದು ಹೇಳಿಕೆ ನೀಡಲು ಮುಂದಾಗಿದ್ದೆ. ಈ ವೇಳೆ ಮಾಧ್ಯಮಗಳು ನಿಮ್ಮ ಮೇಲೆ ಈ ರೀತಿಯ ಆರೋಪ ಬಂದಿದೆ ಎಂದು ಹೇಳಿದರು.
ನಾನು ಲಕ್ಷ್ಮಿ ಅವರು ಎದುರಿಗೆ ಸಿಕ್ಕಾಗ ಏನ್ ಲಕ್ಷ್ಮಕ್ಕ ಎಂದು ಮಾತನಾಡುತ್ತೇನೆ. ಅವರು ಏನಂದರು, ನಾನು ಏನಂದೆ ಎಂದು ಮಾತನಾಡುವುದಿಲ್ಲ. ಎಲ್ಲವೂ ಅಂತರಾತ್ಮ ಪರಮಾತ್ಮನಿಗೆ ಬಿಟ್ಟಿದ್ದು ಎಂದು ತಿಳಿಸಿದರು.
ಮಧ್ಯಾಹ್ನ ಊಟ ಮುಗಿಸಿ ಬರುವಾದ ಪಶ್ಚಿಮ ದ್ವಾರದಲ್ಲಿ ನನ್ನ ಮೇಲೆ ದಾಳಿ ನಡೆಯಿತು. ಆಗ ಮಾರ್ಷಲ್ ಗಳು ಪೊಲೀಸರು ಅವರನ್ನು ದೂರ ತಳ್ಳಿ ನಮ್ಮನ್ನು ಒಳಗಡೆ ಕರೆದುಕೊಂಡು ಹೋದರು. ನಂತರ ನನ್ನ ಮೇಲೆ ಏನೇನು ಮಾತನಾಡಿದ್ದಾರೆಂದು ವಿಚಾರ ಗೊತ್ತಾಯಿತು.
ಅಶೋಕ್ ಅವರನ್ನು ಭೇಟಿ ಮಾಡಿ ವಾಪಸ್ ಬರುವಾಗ ಮೂರ್ನಾಲ್ಕು ಜನ ಹಲ್ಲೆ ಮಾಡಲು ಬಂದರು. ನಿನ್ನ ಕೊಲೆ ಮಾಡುತ್ತೇವೆ, ನಿನ್ನ ಹೆಣ ಚಿಕ್ಕಮಗಳೂರಿಗೆ ಕಳುಹಿಸುತ್ತೇವೆ ಎಂದು ಕೂಗಾಡಿ ದರು. ಮಾರ್ಷಲ್ ಗಳು ಅವರನ್ನು ಗೇಟಿನ ಆಚೆ ಹಾಕಿದರು. ಆಗಲೂ ಗೇಟ್‌ಗೆ ಒದೆಯುತ್ತಿದ್ದರು. ನಾನು ಅಲ್ಲೇ ಧರಣಿ ಕೂತೆ, ನಂತರ ಸಭಾಪತಿ ಭೇಟಿಗೆ ಕರೆ ಬಂತು ಹೋದೆ ಎಂದು ಹೇಳಿದರು.
ಸಭಾಪತಿಗೂ ಪಶ್ಚಿಮ ದ್ವಾರದ ಹಲ್ಲೆ, ಮೊಗಸಾಲೆ ಯಲ್ಲಿ ಹಲ್ಲೆ ನಡೆದ ದೂರು ಕೊಡಲಾಗಿದೆ, ಆಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ದೂರು ಕೊಟ್ಟಿದ್ದಾರೆಂದು ಸಭಾಪತಿ ಹೇಳಿದರು. ನಾನೂ ಏನಾಯಿತೆಂದು ಲಿಖಿತ ಸಮಜಾಯಿಷಿ ಕೊಟ್ಟೆ. ಕಲಾಪ ಆರಂಭವಾಗಿ ಸ್ಪೀಕರ್ ರೂಲಿಂಗ್ ಹೇಳಿ ಅನಿರ್ದಿಷ್ಟಾವಧಿಗೆ ಮುಂದೂಡಿ ದರು.
ನಂತರ ಲಕ್ಷ್ಮಿ ಹೆಬ್ಬಾಳ್ಕರ್, ಚನ್ನರಾಜ್, ನಜೀರ್ ಅಹಮದ್ ಅವರೆಲ್ಲ ನನ್ನ ಏಕವಚನದಲ್ಲಿ ನಿಂದಿಸಿದರು. ಕತೆ ಮುಗಿಸುವುದಾಗಿ ಬೆದರಿಕೆ ಹಾಕಿದರು. ನಂತರ ನಾನು ಸಭಾಪತಿ ಕೊಠಡಿಗೆ ಹೋಗಿ ಅಲ್ಲಿ ಏನಾಯ್ತು ಅಂತ ಹೇಳಿ ಲಿಖಿತ ದೂರು ನೀಡಿದೆವು ಎಂದು ಸಿ.ಟಿ.ರವಿ ವಿವರಿಸಿದರು.
ಸಭಾಪತಿಯವರು ಎಡಿಜಿಪಿಯವರನ್ನು ಕರೆದು ಸಿ.ಟಿ ರವಿ ಅವರನ್ನು ಯಾವುದೇ ತೊಂದರೆ ಆಗದೇ ಮನೆಗೆ ತಲುಪಿಸಬೇಕು ಮತ್ತು ಹಲ್ಲೆಗೆ ಮುಂದಾಗಿದ್ದವರ ವಿರುದ್ಧವೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಇದಕ್ಕೆ ಎಡಿಜಿಪಿ ಕೆಲವರನ್ನು ವಶಕ್ಕೆ ಪಡೆದಿದ್ದೇವೆ ಅವರ ಮೇಲೆ ಕ್ರಮ ಆಗುತ್ತದೆ ಎಂದು ಹೇಳಿದ್ದಾರೆ ಎಂದು ರವಿ ಮಾಹಿತಿ ನೀಡಿದರು.