ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕವಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ (84) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಅವರು ಕಳೆದ 3-4 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.
ಸುಶ್ಮಿತಾ ಮತ್ತು ಈಶಾನ್ಯೆ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ರಾಜೇಶ್ವರಿಯವರು ಅಗಲಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ನಿಧನದ ಬಳಿಕ ಚಿಕ್ಕಮಗಳೂರಿನ ಮೂಡಿಗೆರೆಯ ಹ್ಯಾಂಡ್ಪೋಸ್ಟ್ ನ ತೋಟದ ಮನೆಯಲ್ಲಿ ರಾಜೇಶ್ವರಿಯವರು ಕಾಫಿ ತೋಟ ನೋಡಿಕೊಂಡು ಒಬ್ಬರೇ ವಾಸವಾಗಿದ್ದರು. ಕಳೆದ ಕೆಲ ದಿನದ ಹಿಂದೆ ಬೆಂಗಳೂರಿನ ಮಗಳ ಮನೆಗೆ ಬಂದಿದ್ದರು.
ರಾಜೇಶ್ವರಿಯವರ ಇಚ್ಚೆಯಂತೆ ಅವರ ದೇಹವನ್ನು ಆಸ್ಪತ್ರೆಯೊಂದಕ್ಕೆ ದಾನಮಾಡಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.
ಬೆಂಗಳೂರು ಮೂಲದ ದಿ.ರಂಗಪ್ಪನವರ ಪುತ್ರಿಯಾದ ರಾಜೇಶ್ವರಿಯವರು ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂಎ ಮಾಡಲು ಮೈಸೂರಿನ ಮಾನಸ ಗಂಗೋತ್ರಿಗೆ ಬಂದಿದ್ದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಪರಿಚಯವಾಗಿ ನಂತರ ಪ್ರೀತಿಸಿ ವಿವಾಹವಾಗಿದ್ದರು.
ಕುವೆಂಪು ಅವರು ಸ್ವತಃ ಮುಂದೆ ನಿಂತು ವಿವಾಹ ಕಾರ್ಯಕ್ರಮ ನೆರವೇರಿಸಿದ್ದರು.
ಮಂತ್ರಮಾಂಗಲ್ಯ ವಿವಾಹ ಸಂಹಿತೆಯನ್ನು ಆ ಸಮಯದಲ್ಲಿ ಮೊಟ್ಟ ಮೊದಲ ಬಾರಿಗೆ ತೇಜಸ್ವಿ ಮತ್ತು ರಾಜೇಶ್ವರಿಯವರಿಗೆ ಕುವೆಂಪು ಭೋದಿಸಿದ್ದರು.
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದ ರಾಜೇಶ್ವರಿ ಅವರೂ ಸಹ ಸಾಹಿತ್ಯ ಲೋಕದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ತನ್ನ ಪತಿಯ ಬಗ್ಗೆ ನನ್ನ ತೇಜಸ್ವಿ ಎಂಬ ಪುಸ್ತಕ ಬರೆದು ಪ್ರಖ್ಯಾತಿಗಳಿಸಿದ್ದರು. ನಮ್ಮ ಮನೆಗೂ ಬಂದರು ಗಾಂಧೀಜಿ ಎಂಬ ಕೃತಿಯನ್ನು ಅವರು ರಚಿಸಿದ್ದರು.