ರಾಜ್ಯದಲ್ಲಿ 100 ಹೊಸ ಪೊಲೀಸ್ ಠಾಣೆಗಳ ನಿರ್ಮಾಣ – ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಳಗಾವಿ:ರಾಜ್ಯದಲ್ಲಿ 100 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ  ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸಕ್ತ ವರ್ಷ 100 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುವುದು. ಅವುಗಳಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡುವುದು ಎಂದು ಭರವಸೆ ನೀಡಿದರು.

ಕೆಲವು ಕಡೆ ಠಾಣೆಗಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ದುರಸ್ತಿ ಮಾಡಿದರೂ ಯಾವುದೇ ಉಪಯೋಗವಾಗುತ್ತಿಲ್ಲ. ಹೀಗಾಗಿ ಆಧುನಿಕ ಸೌಲಭ್ಯವುಳ್ಳ ಕಟ್ಟಡಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.

ಪೊಲೀಸರು ವಾಸ ಮಾಡುವ ಕ್ವಾಟರ್ಸ್ ಗಳ ಬಗ್ಗೆ ದೂರುಗಳು ಬಂದಿದೆ. ಕೆಲವು ಸೌಲಭ್ಯಗಳು ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಗೃಹ 2025 ಯೋಜನೆಯಡಿ ಹತ್ತು ಸಾವಿರ ಪೊಲೀಸ್ ಕ್ವಾಟರ್ಸ್ ಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪೊಲೀಸರು ಕಟ್ಟಡಗಳು ಮತ್ತು ಅವರು ವಾಸ ಮಾಡುವ ಕ್ವಾಟ್ರರ್ಸ್‍ಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದೆ. ನಾವು ಸರಿ ಇಲ್ಲದಿದ್ದರೆ ವ್ಯವಸ್ಥೆಗಳು ಕೂಡ ಸರಿ ಇರುವುದಿಲ್ಲ. ಮೊದಲು ಇದನ್ನು ಸರಿಪಡಿಸಿ ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.