ಕಳೆದ ಬಾರಿಗಿಂತ ಮತ ಪ್ರಮಾಣ ಹೆಚ್ಚಾಗಿದೆ -ಡಿಕೆಶಿ

ಬೆಂಗಳೂರು:ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದೆ,ನಾವು ಸೋತಿರುವ ಕ್ಷೇತ್ರಗಳಲ್ಲಿ ಮತ ಪ್ರಮಾಣ ನೋಡಿದರೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷಕ್ಕೆ ಹಲವಾರು ಅನುಕೂಲಗಳು ಇರುತ್ತವೆ ಎಂಬುದು ನಮಗೆ ತಿಳಿದಿದೆ‌ ಎಂದರು.

ವಿಧಾನ ಪರಿಷತ್ತಿನಲ್ಲಿ ಬಹುಮತದ ಬಗ್ಗೆ ನಾವು ಲೆಕ್ಕ ಹಾಕಿಲ್ಲ. ಬಿಜೆಪಿ ಸರ್ಕಾರ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದ್ದು, ಬಹುಮತ ಇಲ್ಲದಿದ್ದರೂ ಅಧಿಕಾರ ಹಿಡಿದಿದ್ದಾರೆ ಎಂದು ದೂರಿದರು.

ನಾವು ವಿರೋಧ ಪಕ್ಷದಲ್ಲಿದ್ದೇವೆ. ಆದರೆ ಮತದಾರರು ಈ ಚುನಾವಣೆಯಲ್ಲಿ ಬದಲಾವಣೆ ಬಯಸಿರುವ ಸಂದೇಶ ನೀಡಿದ್ದಾರೆ.

ನಾವು ದುಡ್ಡಿನ ಮೇಲೆ ರಾಜಕಾರಣ ಮಾಡಿಲ್ಲ. ದುಡ್ಡೇ ದೊಡ್ಡಪ್ಪ ಎನ್ನುವವರು ಬಿಜೆಪಿಯವರು. ನಾವು ಬಡತನ ನಿರ್ಮೂಲನೆ, ಅಭಿವೃದ್ಧಿ ಆಧಾರದ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಪ್ರಾಬಲ್ಯ ಇರುವ ಕಡೆಗಳಲ್ಲೂ ನಾವು ಕಡಿಮೆ ಅಂತರದಲ್ಲಿ ಸೋತಿದ್ದೇವೆ. ನಮಗೆ ಅಷ್ಟು ಸಾಕು ಎಂದರು.

ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಪ್ರಸ್ತಾಪ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾವು ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತೇವೆ.  ಇದು ಒಂದು ಧರ್ಮದ ವಿಚಾರವಲ್ಲ. ಯಾವ ಧರ್ಮಕ್ಕೂ ನೋವಾಗಬಾರದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮತಾಂತರ ವಿಚಾರವಾಗಿ ಏನು ಹೇಳಿದ್ದಾರೆ, ಈ ವಿಚಾರವಾಗಿ ಸಂವಿಧಾನ ಏನು ಹೇಳುತ್ತೆ, ಎಲ್ಲವೂ ಇದರಲ್ಲಿ ಅಡಗಿದೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದವರು ಈಗ ಅದರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಧರ್ಮ ಯಾವುದಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಯಾವುದಾದರೂ ನಿಷ್ಠೆ ಒಂದೇ. ದೇವನೊಬ್ಬ ನಾಮ ಹಲವು. ಯಾರಾದರೂ ನಮಗೆ ಇದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿದ್ದಾರಾ? ಯಾವ ಧರ್ಮ ಪಾಲಿಸಬೇಕೋ ಅದು ಅವರ ಆಯ್ಕೆ ಎಂದು ಡಿಕೆಶಿ ಹೇಳಿದರು.

ಬಲವಂತ ಮಾಡುತ್ತಿರುವವರು ಯಾರು? ಈ ಹಿಂದೆ ಬೆಂಗಳೂರಿನಲ್ಲಿ ಇದ್ದದ್ದು, ಸೆಂಟ್ ಮಾರ್ಥಾಸ್, ಸೇಂಟ್ ಜಾನ್ಸ್, ವಿಕ್ಟೊರಿಯಾ ಆಸ್ಪತ್ರೆಗಳು. ಈಗ ಬೇರೆ ಆಸ್ಪತ್ರೆಗಳು ಬಂದಿವೆ. ಅಲ್ಲಿ ಚಿಕಿತ್ಸೆ ಪಡೆದವರೆಲ್ಲಾ ಮತಾಂತರವಾಗಿದ್ದಾರಾ?  ಕ್ರೈಸ್ತ ಕಾಲೇಜುಗಳಲ್ಲಿ ಓದಿದವರೆಲ್ಲಾ ಮತಾಂತರವಾಗುತ್ತಾರಾ? ನಾನು ಕೂಡಾ ಕನಕಪುರದಲ್ಲಿ ಕ್ರೈಸ್ತ ಕಾಲೇಜಿನಲ್ಲೇ ಎರಡು ವರ್ಷ ಓದಿದ್ದೆ. ನನಗೆ ಮತಾಂತರವಾಗಲು ಯಾರಾದರೂ ಹೇಳಿದ್ದರಾ? ಸಮಾಜದಲ್ಲಿ ಸೇವೆ ಮಾಡುವವರಿಗೆ ಸರ್ಕಾರ ಅಪಮಾನ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ, ಪಕ್ಷಕ್ಕೆ ಅದರದೇ ಆದ ನೀತಿಗಳಿರುತ್ತವೆ. ಈ ಹಿಂದೆ ರಾಹುಲ್ ಗಾಂಧಿ ಅವರು ತೆಗೆದುಕೊಂಡ ತೀರ್ಮಾನವನ್ನು ನಾವೆಲ್ಲರೂ ಒಪ್ಪಿ ನಡೆದುಕೊಂಡಿದ್ದೇವೆ. ಈ ಹಿಂದೆ ತೆಗೆದುಕೊಂಡ ತೀರ್ಮಾನ ಸರಿಯೋ, ತಪ್ಪೋ ಎಂಬ ಬಗ್ಗೆ ಈಗ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.