ಸಿ ಎಂ ಬೊಮ್ಮಾಯಿಯವರ ಬೂಟ್ ಪಾಲಿಶ್ ಮಾಡಲು ಯತ್ನ

ಬೆಳಗಾವಿ: ಬಾಗಲಕೋಟೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೂಟ್ ಪಾಲಿಶ್ ಮಾಡಲು ಮುಂದಾದ ಘಟನೆ ನಡೆಯಿತು.

ಸಿ ಎಂ ಅವರು ತಂಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ,  ಬೊಮ್ಮಾಯಿಯವರ ಬೂಟ್ ಪಾಲಿಶ್ ಮಾಡಲು ಕರವೆ ಕಾರ್ಯಕರ್ತರು ಬಂದಿದ್ದರು.

ಇದನ್ನು ಗಮನಿಸಿದ ಭದ್ರತಾ ಪೊಲೀಸರು ತಕ್ಷಣ  ಬೂಟ್ ಪಾಲಿಶ್​ ಮಾಡಲು ತಂದಿದ್ದ ಪಾಲಿಶ್ ಪೆಟ್ಟಿಗೆಯನ್ನು ವಶಕ್ಕೆ ಪಡೆದರು.

ತಾಲೂಕಿನ ಮಚ್ಚೆಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಂಗಿದ್ದಾರೆ.

ಹೀಗಾಗಿ ಬಾಗಲಕೋಟೆಯಿಂದ ಆಗಮಿಸಿದ ಕರವೇ ಕಾರ್ಯಕರ್ತರು ಸಿಎಂ ಭೇಟಿಗೆ ಅವಕಾಶ ಕೊಡುವಂತೆ ಮನವಿ ಮಾಡಿದರು. ಆದರೆ,  ಭದ್ರತಾ ಪೊಲೀಸರು ಸಿಎಂ‌ ಭೇಟಿಗೆ ಅವಕಾಶ ಕೊಡಲಿಲ್ಲ.

ಈ ವೇಳೆ ಬಾಲಗಕೋಟೆ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಬಾಗಲಕೋಟೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಆಗ್ರಹಿಸಿದರು.

ಕರವೇ ಕಾರ್ಯಕರ್ತರು ಜಮಾವಣೆಯಾಗುತ್ತಿದ್ದಂತೆ, ವಿಟಿಯು ಗೇಟ್ ಬಳಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಯಿತು. ಭಾರತ 1971ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ದದಲ್ಲಿ ಜಯಸಾಧಿಸಿ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ  ಬೆಳಗಾವಿಯ ಮರಾಠಿ ಲಘು ಪದಾತಿ ದಳ ಕೇಂದ್ರ(ಎಂಎಲ್ಐಆರ್​​ಸಿ)ದಲ್ಲಿ ಹಮ್ಮಿಕೊಂಡಿದ್ದ “ವಿಜಯ ದಿವಸ” ಆಚರಣೆಯಲ್ಲಿ  ಬೊಮ್ಮಾಯಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿತ್ತು.

ಆದರೆ, ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರಿಂದ ಹೊರಡಲು ತಡವಾದ್ದರಿಂದ ಒಂದು ಗಂಟೆ ಕಾಲ ಕಾರ್ಯಕ್ರಮ ಮುಂದೂಡಲಾಯಿತು.