ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಸಮರದಲ್ಲಿ ಭಾರತ ವಿಜಯದ ಪತಾಕೆ ಹಾರಿಸಿ 51 ವರ್ಷ ಕಳೆದಿದೆ.
1971ರ ಡಿ. 3ರಂದು ಆರಂಭವಾದ ಇಂಡೋ-ಪಾಕಿಸ್ತಾನ್ ಯುದ್ಧ 13 ದಿನಗಳವರೆಗೂ ನಡೆಯಿತು. ಬಳಿಕ ಭಾರತೀಯ ಸೇನೆಯ ಪ್ರಾಬಲ್ಯಕ್ಕೆ ಸೋತ ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಕ್ಕೆ ಶರಣಾಯಿತು.
ಭಾರತ ತನ್ನ ಪಾರಂಪರಿಕ ವೈರಿ ಪಾಕಿಸ್ತಾನವನ್ನು ಬಗ್ಗು ಬಡಿದು, ಬಾಂಗ್ಲಾವನ್ನು ಅದರ ಕಪಿಮುಷ್ಠಿಯಿಂದ ಬಿಡಿಸಿ, ಬಾಂಗ್ಲಾದೇಶ ಉದಯವಾಗಲು ಕಾರಣವಾದ ದಿನ.
‘ವಿಜಯ್ ದಿವಸ್’ ಗೆ ಕಾರಣವಾಗಿದ್ದು ಭಾರತೀಯರು 1971ರಲ್ಲಿ ಈ ದಿನದಂದು ಯುದ್ದವು ಅಂತ್ಯಗೊಂಡು ಪಾಕಿಸ್ತಾನದ ಸೈನ್ಯದ ಮುಖ್ಯಸ್ಥರಾದ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿಯು, ತನ್ನ 93,000 ಸೈನಿಕ ಪಡೆಯೊಂದಿಗೆ ಭಾರತೀಯ ಸೈನ್ಯ ಮತ್ತು ಮುಕ್ತಿ ಬಾಹಿಣಿಗೆ ಬೇಷರತ್ತಾದ ಶರಣಾಗತಿಯಾಯಿತು.
ಭಾರತದಲ್ಲಿ ಈ ದಿನವನ್ನು ಯುದ್ದದಲ್ಲಿ ರಾಷ್ಟ್ರಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ‘ವಿಜಯ್ ದಿವಸ್’ ಆಚರಿಸಲಾಗುತ್ತದೆ.
ಪಶ್ಚಿಮ ಪಾಕಿಸ್ತಾನದ (ಇಂದಿನ ಪಾಕಿಸ್ತಾನ) ಹಿಡಿತದಲ್ಲಿದ್ದ ಪೂರ್ವ ಪಾಕಿಸ್ತಾನವನ್ನು (ಇಂದಿನ ಬಾಂಗ್ಲದೇಶ) ಪಾಕಿಸ್ತಾನದ ದಬ್ಬಾಳಿಕೆಯಿಂದ ಹೊರತಂದು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು ಭಾರತ.
ಇದಕ್ಕಾಗಿ ಭಾರತ ತನ್ನ ಹೆಮ್ಮೆಯ ನೂರಾರು ಸೈನಿಕರನ್ನು ಕಳೆದುಕೊಂಡಿತು. ಭಾರತೀಯ ಸೈನಿಕರ ಶೌರ್ಯ ಸಾಹಸದ ಮುಂದೆ ಪಾಕಿಸ್ತಾನ ಮಣ್ಣು ಮುಕ್ಕಿತು. ಬಾಂಗ್ಲಾಗೆ ವಿಮೋಚನೆ ನೀಡುವ ಮೂಲಕ ಭಾರತ ಪ್ರಪಂಚಕ್ಕೆ ತನ್ನ ಶಕ್ತಿಯನ್ನು ತೋರಿಸಿದರೆ, ಭಾರತದ ಅಮೂಲ್ಯ ಸಹಾಯದಿಂದ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು.
ಡಿಸೆಂಬರ್ 16ನ್ನು ಭಾರತ ತನ್ನ ವಿಜಯ ದಿವಸ್ ಎಂದು ಆಚರಿಸಿದರೆ, ಬಾಂಗ್ಲಾದೇಶ ಆ ದಿನವನ್ನು ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತಿದೆ.
ಬಾಂಗ್ಲಾ ವಿಮೂಚನೆ
ಸ್ವಾತಂತ್ರ್ಯಾನಂತರ ಅಖಂಡ ಭಾರತ, ಭಾರತ-ಪಾಕಿಸ್ತಾನ ಎಂದು ವಿಭಜನೆಯಾಯಿತು. ಮುಸ್ಲಿಂರು ಅಧಿಕವಿದ್ದ ಇಂದಿನ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂದಾಯಿತು. ಪೂರ್ವ ಬಂಗಾಳ, ಪೂರ್ವ ಪಾಕಿಸ್ತಾನವಾಯಿತು.
ಆದರೆ, ಸ್ವಾತಂತ್ರ್ಯಾನಂತರ ಪಶ್ಚಿಮ ಪಾಕಿಸ್ತಾನದಲ್ಲಿ ಅರಾಜಕತೆ, ಅನ್ಯಾಯ, ದೌರ್ಜನ್ಯ ಹೆಚ್ಚಾದವು. ಪಶ್ಚಿಮ ಪಾಕಿಸ್ತಾನದ ಬಿಗಿ ಹಿಡಿತ ಪೂರ್ವ ಪಾಕಿಸ್ತಾನದ ಮೇಲಿತ್ತು. 1951ರಿಂದ ಪ್ರತ್ಯೇಕ ಬಾಂಗ್ಲಾದೇಶ ಕೂಗು ಪ್ರಾರಂಭವಾಯಿತು. ಆದರೆ, ಇದಕ್ಕೆ ಪಶ್ಚಿಮ ಪಾಕಿಸ್ತಾನ ಸೊಪ್ಪು ಹಾಕಲಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಸ್ವತಂತ್ರ ಬಾಂಗ್ಲಾ ಕೂಗು ಹೆಚ್ಚಾಯಿತು.
ಬ್ರಿಟೀಷರಿಂದ ಸ್ವಾತಂತ್ರ ಸಿಕ್ಕ ನಂತರ ಪಾಕಿಸ್ತಾನ ತನ್ನ ಮಿಲಿಟರಿ ಶಕ್ತಿಯನ್ನು ಹಾಗೂ ಬಹುತೇಕ ಅಧಿಕಾರವನ್ನು ತನಗೆ ಮಾತ್ರ ಸಿಮೀತವಾಗುವಂತೆ ಮಾಡಿಕೊಂಡಿತು. ಇದರಿಂದ ಪೂರ್ವ ಪಾಕಿಸ್ತಾನ ಕೇವಲ ಪಾಕಿಸ್ತಾನದ ಅಡಿಯಾಳಾಯಿತು.
ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) ನಿರಂತರವಾಗಿ ನಡೆಯುತ್ತಿದ್ದ ಅತ್ಯಾಚಾರ, ಹಿಂಸಾಚಾರ, ಕೊಲೆ ಮತ್ತು ಕಲಹಗಳ ಪರಿಣಾಮ ಭಾರತದೊಳಗೆ ಒಂಬತ್ತು ಮಿಲಿಯನ್ ನಿರಾಶ್ರಿತರು ನುಸುಳುವಂತೆ ಮಾಡಿತು. ಮುಖ್ಯವಾಗಿ ಅಲ್ಪಸಂಖ್ಯಾತ ಹಿಂದೂ ಜನರನ್ನು ಗುರಿಯನ್ನಾಗಿರಿಸಿಕೊಂಡ, ಬೆಂಗಾಳಿಗಳ ಮೇಲೆ ಪಾಕಿಸ್ತಾನವು ವ್ಯಾಪಕ ಹತ್ಯಾಕಾಂಡ ನಡೆಸಿತ್ತು.
ಬಾಂಗ್ಲಾದೇಶದಾದ್ಯಂತ ಯಾವ ಕರುಣೆಯೂ ಇಲ್ಲದೆ ಕ್ರೌರ್ಯ ಮೆರೆದ ಪಾಕಿಸ್ತಾನದ ಜನರಲ್ ಟಿಕ್ಕಾ ಖಾನ್ ಸಾಲು ಸಾಲು ಹತ್ಯೆಗಳನ್ನು ನಡೆಸಿದ. ಆತನಿಗೆ ‘ಬಂಗಾಳದ ಕಟುಕ’ ಎಂದೇ ಕರೆಯಲಾಯಿತು. ಇದೇ ವ್ಯಕ್ತಿ ಬಲೂಚಿಸ್ತಾನದಲ್ಲಿಯೂ ಭೀಕರ ಹತ್ಯಾಕಾಂಡ ನಡೆಸಿ, ‘ಬಲೂಚಿಸ್ತಾನದ ಕಟುಕ’ ಎಂದು ಮತ್ತೊಂದು ಕುಖ್ಯಾತಿಯನ್ನು ಪಡೆದ.
1970ರಲ್ಲಿ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದ ‘ಅನಾಮಿ ಲಿಗ್’ ಪಕ್ಷ 169 ಸ್ಥಾನಗಳ ಪೈಕಿ 167 ಸ್ಥಾನಗಳನ್ನು ಗೆದ್ದಿತು (ಪೂರ್ವ ಪಾಕಿಸ್ತಾನದಲ್ಲಿ ಮಾತ್ರ. ಒಟ್ಟು 319 ಸ್ಥಾನಗಳು ಇದ್ದವು). ಶೇಖ್ ಮುಜಿಬುರ್ ರೆಹಮಾನ (ಇಂದಿನ ಬಾಂಗ್ಲಾ ದೇಶದ ಪ್ರಧಾನಿ ಶೇಖ ಹಸಿನಾ ತಂದೆ) ನೇತೃತ್ವದ ಅನಾಮಿ ಲಿಗ್ ಸ್ವತಂತ್ರ ಬಾಂಗ್ಲಾ ಪರವಾಗಿತ್ತು.
ಸಹಜವಾಗಿ ಅವರು ಪ್ರತ್ಯೇಕ ಬಾಂಗ್ಲಾ ಕೂಗನ್ನು ಪಾಕಿಸ್ತಾನದಲ್ಲಿ ಮೊಳಗಿಸಿದರು. ಆದರೆ, ಇದಕ್ಕೆ ಅಂದಿನ ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾಖಾನ್ ಮತ್ತು ಪಿಪಿಪಿ ಅಧ್ಯಕ್ಷ ಜುಲ್ಪಿಕರ ಬುಟ್ಟೊ ತೀವ್ರ ವಿರೋಧ ವ್ಯಕ್ತಪಡಿಸಿ, ಪೂರ್ವ ಬಂಗಾಳಿಗರ ಮೇಲೆ ಕೆಂಡಕಾರತೊಡಗಿದರು.
1970ರ ಚಂಡಮಾರುತ
1970ನೇ ವರ್ಷ ಬಾಂಗ್ಲಾ ಪಾಲಿಗೆ ಕರಾಳವಾದ ವರ್ಷವಾಗಿತ್ತು. ಆ ವರ್ಷ ಪೂರ್ವ ಪಾಕಿಸ್ತಾನದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿ ಲಕ್ಷಾಂತರ ಜನ ಸಾವನ್ನಪ್ಪಿದರು. ಕೋಟ್ಯಂತರ ಜನ ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದರು.
ಆಡಳಿತ ಕೇಂದ್ರವಾಗಿದ್ದ ಪಾಕಿಸ್ತಾನ ಮಾತ್ರ ಇದಕ್ಕೂ ತನಗೂ ಸಂಬಂಧವಿಲ್ಲದಂತೆ ವರ್ತಿಸಿತು. ಇದು ಬಾಂಗ್ಲಾದವರಿಗೆ ಸ್ವತಂತ್ರದ ಕಿಚ್ಚು ಹಬ್ಬಲು ಕಾರಣವಾಯಿತು. ಅಲ್ಲಿಯವರೆಗೂ ಒಳಗೊಳಗೆ ನಡೆಯುತ್ತಿದ್ದ ಪ್ರತ್ಯೇಕ ದೇಶದ ಕೂಗು, ಕಹಳೆಯಾಗಿ ಮಾರ್ಪಟ್ಟಿತು. ಪೂರ್ವ ಬಂಗಾಳದ ತುಂಬ ಭಿನ್ನಮತೀಯ ಚಟುವಟಿಕೆಗಳು ಪ್ರಾರಂಭವಾದವು. ಪಾಕಿಸ್ತಾನ ವಿರುದ್ಧ ಪ್ರತಿಭಟನೆ, ಗಲಭೆ, ಗದ್ದಲ ಶುರು ಆದವು. ಇದನ್ನು ಹತ್ತಿಕ್ಕಲು ಪಾಕಿಸ್ತಾನ ದೊಡ್ಡ ಸೈನಿಕ ಪಡೆಯನ್ನು ಬಾಂಗ್ಲಾಕ್ಕೆ ಕಳಿಸಿತು. ಪಾಕಿಸ್ತಾನ ಸೈನಿಕರ ಹಿಂಸಾಚಾರ ಒಂದು ಕಡೆಯಾದರೆ, ಚಂಡಮಾರುತದ ಪರಿಣಾಮವಾಗಿ ಲಕ್ಷಾಂತರ ಜನ ನಿರಾಶ್ರಿತರಾಗಿ ಭಾರತದ ಕಡೆ ವಲಸೆ ಪ್ರಾರಂಭಿಸಿದರು. ಆಗಿನ ಪೂರ್ವ ಪಾಕಿಸ್ತಾನದಿಂದ ಸುಮಾರು 10 ಲಕ್ಷ ನಿರಾಶ್ರಿತರು ಭಾರತಕ್ಕೆ ನುಸುಳಿದರು. ಅವರು ಭಾರತದಲ್ಲಿ ಅಭದ್ರತೆ ಸೃಷ್ಠಿಸುವುದರ ಜೊತೆಗೆ ದೇಶದ ಆರ್ಥಿಕ ಮುಗ್ಗಟ್ಟಿಗೂ ಕಾರಣರಾದರು.
1971ರ ಮಾರ್ಚ್‍ನಲ್ಲಿ ಪಾಕಿಸ್ತಾನ ಸೈನ್ಯ ಡಾಕಾದ ಮೇಲೆ ದಾಳಿ ಮಾಡಿ ಅನಾಮಿ ಲಿಗ್ ನ ಮುಖಂಡರನ್ನು ಬಂಧಿಸಿತು. ಅಲ್ಲಿಂದ ಬಾಂಗ್ಲಾ ಹೋರಾಟ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿತು.
ಪಶ್ಚಿಮ ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನದ ದಾಯಾದಿ ಜಗಳವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಭಾರತ, 1971ರ ಡಿಸೆಂಬರ್ ನಲ್ಲಿ ಬಾಂಗ್ಲಾ ವಿಮೋಚನೆಗೆ ಸಹಾಯ ಮಾಡುವುದಾಗಿ ಘೋಷಣೆ ಮಾಡಿತು.
ಇದಕ್ಕಾಗಿ ಭಾರತ ತನ್ನ ಈಶಾನ್ಯ ರಾಜ್ಯಗಳಲ್ಲಿ ಬಾಂಗ್ಲಾ ನಿರಾಶ್ರಿತರಿಗೆ ಕ್ಯಾಂಪ್ ಗಳನ್ನು ತೆರೆಯಿತು. ಇದರ ನೇತೃತ್ವವನ್ನು ವಹಿಸಿಕೊಂಡಿದ್ದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ.
ಭಾರತದ ಪೂರ್ವ ಗಡಿಯನ್ನು ನಿರಾಶ್ರಿತರ ಆಶ್ರಯಕ್ಕಾಗಿ ಸುರಕ್ಷಿತ ಸ್ಥಳವೆಂದು ಘೋಷಿಸಲಾಯಿತು. ಪಶ್ಚಿಮ ಬಂಗಾಲ, ಬಿಹಾರ, ಆಸ್ಸಾಮ್, ಮೇಘಾಲಯ ಮತ್ತು ತ್ರಿಪುರ ಸರ್ಕಾರಗಳು ಗಡಿಯುದ್ದಕ್ಕೂ ನಿರಾಶ್ರಿತರ ಶಿಬಿರಗಳನ್ನು ಕಟ್ಟಿ ನಿಲ್ಲಿಸಲಾಯಿತು.
ಝೀಯಾ ಉರ್ ರೆಹಮಾನ್ ಮತ್ತು ಶೇಖ್ ಮುಜೀಬರ್ ರೆಹಮಾನ್ ಅವರು ಈ ಶಿಬಿರಗಳನ್ನು ಗೆರಿಲ್ಲಾ ತರಬೇತಿಗೆ ಬಳಸಿಕೊಂಡರು. ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಹಿಂಸಾಚಾರ, ಹತ್ಯಾಕಾಂಡ ಅನಾಹುತಗಳು ನಿಲ್ಲುವ ಲಕ್ಷಣ ಕಾಣಿಸಲಿಲ್ಲ. ಇದರಿಂದ ಭಾರತಕ್ಕೆ ನುಸುಳುತ್ತಿದ್ದ ನಿರಾಶ್ರಿತರ ಸಂಖ್ಯೆಯೂ ಹೆಚ್ಚುತ್ತಿತ್ತು. ಬಂದವರಿಗೆಲ್ಲ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ನೀಡುವ ಬದಲು ಆ ಹತ್ಯಾಕಾಂಡವನ್ನೇ ತಡೆಯುವ ಹೋರಾಟ ಸೂಕ್ತ ಎಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ನಿರ್ಧರಿಸಿದರು.
1971ರ ಡಿಸೆಂಬರ್ ಸಮೀಪಿಸುತ್ತಿದ್ದಂತೆ ಭಾರತ ಸರ್ಕಾರ ದೊಡ್ಡ ಮಟ್ಟದ ಸೈನ್ಯದ ಜಮಾವಣೆಯನ್ನು ಪೂರ್ವದ ಗಡಿಯಲ್ಲಿ ಮಾಡಿತು. ಅಂದುಕೊಂಡಂತೆ ಪಾಕಿಸ್ತಾನ ಅಧ್ಯಕ್ಷ ಯಾಹ್ಯಾಖಾನ್, ಎರಡೂ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಡಿಸೆಂಬರ್ 3ರಿಂದ ಭಾರತದೊಂದಿಗೆ ಯುದ್ಧಕ್ಕೆ ನಿಂತರು. ಡಿಸೆಂಬರ್ 3ರಂದು ಆಗ್ರಾ ಸೇರಿದಂತೆ ಭಾರತದ ಎಂಟು ವಾಯುನೆಲೆಗಳ ಮೇಲೆ ಪಾಕಿಸ್ತಾನ ವಾಯು ದಾಳಿ ಮಾಡಿತು. ಆದರೆ, ಇದನ್ನು ಭಾರತ ಅಷ್ಟೇ ಕ್ಷೀಪ್ರವಾಗಿ ಹಿಮ್ಮೆಟ್ಟಿಸಿ, ಪಾಕಿಸ್ತಾನಕ್ಕೆ ಸರಿಯಾದ ಏಟು ನೀಡಿತು. ಪ್ರತ್ಯೇಕ ಬಾಂಗ್ಲಾಕ್ಕೆ ಹೋರಾಟ ನಡೆಸುತ್ತಿದ್ದ, ಬಾಂಗ್ಲಾದ ಮುಕ್ತಿ ವಾಹಿನಿ ಸಶಸ್ತ್ರ ಪಡೆ ಭಾರತೀಯ ಸೇನೆಯನ್ನು ಕೂಡಿಕೊಂಡಿತು.
ಪಾಕಿಸ್ತಾನದಿಂದ ದಾಳಿ ಆರಂಭ
1971ರ ಡಿ. 3ರಂದು ಪಾಕಿಸ್ತಾನದ ವಾಯು ಪಡೆಯು (ಪಿಎಎಫ್) ಭಾರತ-ಪಾಕ್ ಗಡಿಯಿಂದ 480 ಕಿ.ಮೀ. ದೂರದ ಆಗ್ರಾದಲ್ಲಿರುವ ಭಾರತದ ವಾಯುನೆಲೆ ಸೇರಿದಂತೆ ವಾಯವ್ಯ ಭಾಗದ 11 ವಾಯುನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು.
ಪಾಕಿಸ್ತಾನವು ಸಂಜೆ 5.40ರ ವೇಳೆಗೆ ನಡೆಸಿದ ದಾಳಿಯು 1971ರ ಇಂಡೋ ಪಾಕಿಸ್ತಾನ್ ಯುದ್ಧಕ್ಕೆ ಅಧಿಕೃತ ನಾಂದಿ ಹಾಡಿತು. ಭಾರತೀಯ ವಾಯುನೆಲೆಯನ್ನು ವಶಪಡಿಸಿಕೊಳ್ಳಲು ಯಧ್ಯಾ ಖಾನ್ ನೇತೃತ್ವದಲ್ಲಿ ಪಾಕ್ ದಾಳಿ ನಡೆಸಿತ್ತು. 1967ರಲ್ಲಿ ಇಸ್ರೇಲ್ ಅನುಸರಿಸಿದ ತಂತ್ರ ಅನುಸರಿಸಿದರೆ ಭಾರತದ ಪ್ರಬಲ ವಾಯುಪಡೆಯನ್ನು ಮೊದಲು ನಾಶಪಡಿಸಬಹುದು ಎನ್ನುವುದು ಪಾಕ್ ಸಂಚಾಗಿತ್ತು. ಆದರೆ ಮೊದಲೇ ಜಾಗ್ರತಗೊಂಡಿದ್ದ ಭಾರತ ಅದಕ್ಕೆ ತಕ್ಕ ಉತ್ತರ ನೀಡಿತು.
ದಾಳಿಯ ಮಾಹಿತಿ ದೊರಕುತ್ತಿದ್ದಂತೆಯೇ ಭಾರತೀಯ ಸೇನಾ ಪಡೆಗಳಿಗೆ ಸನ್ನದ್ಧರಾಗುವಂತೆ ಪ್ರಧಾನಿ ಇಂದಿರಾ ಗಾಂಧಿ ಸೂಚನೆ ನೀಡಿದರು.
ಪಾಕಿಸ್ತಾನಕ್ಕೆ ಲಂಕಾ ನೆರವು
ಭಾರತದ ಪಶ್ಚಿಮ ಭಾಗದ ಗಡಿಯಲ್ಲಿನ ಅನೇಕ ಸ್ಥಳಗಳ ಮೇಲೆ ಪಾಕಿಸ್ತಾನ ಸೇನೆ ದಾಳಿ ನಡೆಸಿತು. ಆದರೆ ಭಾರತೀಯ ಸೇನೆಯು ಎದುರಾಳಿಗಳನ್ನು ಸಮರ್ಥವಾಗಿ ಬಗ್ಗುಬಡಿಯಿತು.
ಆಗ್ರಾದ ಮೇಲೆ ದಾಳಿ ನಡೆದಾಗ ತಾಜ್ ಮಹಲ್ ಗೆ ಧಕ್ಕೆಯಾಗದಂತೆ ತಡೆಯಲು ಅದನ್ನು ಎಲೆಗಳು ಹಾಗೂ ಮರದ ಕೊಂಬೆಗಳಿಂದ ಮುಚ್ಚಲಾಯಿತು. ಅದರ ಮಾರ್ಬಲ್ ಗಳು ಕೆಡದಂತೆ ಗೋಣಿಚೀಲಗಳನ್ನು ಹಾಸಲಾಗಿತ್ತು.
ಡಿ. 4-5ರ ರಾತ್ರಿ ಭಾರತದ ನೌಕಾಪಡೆ ಕರಾಚಿ ಬಂದರಿನ ಮೇಲೆ ದಾಳಿ ನಡೆಸಿತು. ಪಾಕಿಸ್ತಾನದ ಪಿಎನ್‍ಎಸ್ ಖೈಬರ್ ಮತ್ತು ಪಿಎನ್‍ಎಸ್ ಮುಹಾಫಿಜ್ ನೌಕೆಗಳು ಸಂಪೂರ್ಣ ನಾಶವಾದರೆ, ಪಿಎನ್‍ಎಸ್ ಷಾಜಹಾನ್ ಬಹುತೇಕ ಹಾನಿಗೊಳಲಾಗಿತ್ತು.
ಪಾಕಿಸ್ತಾನದ ಯುದ್ಧವಿಮಾನಕ್ಕೆ ಕೊಲಂಬೋದ ಬಂಡಾರನಾಯಿಕೆ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಳ್ಳಲು ಅವಕಾಶ ನೀಡುವ ಮೂಲಕ ಶ್ರೀಲಂಕಾವು ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು. ಮಾತ್ರವಲ್ಲ, ಡಿ. 9ರಂದು ಅಮೆರಿಕದ ಅಧ್ಯಕ್ಷ ನಿಕ್ಸನ್, ಭಾರತಕ್ಕೆ ಬೆದರಿಕೆಯೊಡ್ಡಲು ಬಂಗಾಳ ಕೊಲ್ಲಿಗೆ ತಮ್ಮ ಯುದ್ಧ ವಿಮಾನ ಕಳುಹಿಸಲು ನಿರ್ಧರಿಸಿದ್ದರು. ಭಾರತವನ್ನು ನಾಲ್ಕೂ ದಿಕ್ಕುಗಳಿಂದ ಸುತ್ತವರಿದು ಅದು ಪೂರ್ವ ಪಾಕಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಡ ಹೇರುವುದು ಅವರ ಉದ್ದೇಶವಾಗಿತ್ತು.
ಚೀನಾಕ್ಕೆ ಕುಮ್ಮಕ್ಕಿ ನೀಡಿದ ಅಮೆರಿಕ
ಬಾಂಗ್ಲಾದೇಶದ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಸೋವಿಯತ್ ರಷ್ಯಾ, ಭಾರತದ ವಿರುದ್ಧ ಅಮೆರಿಕಾ ಅಥವಾ ಚೀನಾ ಹಸ್ತಕ್ಷೇಪ ಮಾಡಿದರೆ, ಭಾರತದ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ತಿಳಿಸಿತು.
ಪಾಕಿಸ್ತಾನದ ದೀರ್ಘಕಾಲದ ಮಿತ್ರ ಚೀನಾವು ಭಾರತದ ಜತೆಗಿನ ತನ್ನ ಗಡಿಯಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜನೆ ಮಾಡುವಂತೆ ಅಮೆರಿಕವು ಚೀನಾಕ್ಕೆ ಉತ್ತೇಜನ ನೀಡಿತು.
ಆದರೆ ಭಾರತ-ಚೀನಾ ಗಡಿಯಲ್ಲಿ ಸೂಕ್ತ ನೆಲೆ ದೊರಕದ ಕಾರಣ ಚೀನಾ, ಕೂಡಲೇ ಕದನವಿರಾಮ ಘೋಷಿಸುವಂತೆ ಒತ್ತಾಯಿಸಿತು. ಅಮೆರಿಕಾದ ಅಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್ ಬೆಂಬಲ ಪಾಕಿಸ್ತಾನಕ್ಕಿತ್ತು. ಪಾಕಿಸ್ತಾನದ ಮೇಲೆ ಯುದ್ಧ ಮಾಡದಂತೆ ಭಾರತಕ್ಕೆ ಎಚ್ಚರಿಕೆ ನೀಡಿ ವಿಶ್ವಸಂಸ್ಥೆ ನಿರ್ಣಯವನ್ನೂ ಕೈಗೊಂಡಿತು. ಆದರೆ ನೆರೆಯ ಬಾಂಗ್ಲಾದಲ್ಲಿ ನಡೆದ ಘಟನಾವಳಿಗಳು ಅನಿವಾರ್ಯವಾಗಿ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆಗೆ ನಾಂದಿ ಹಾಡಿದವು. ಯಾವ ಅಂತಾರಾಷ್ಟ್ರೀಯ ಒತ್ತಡವೂ ಇದನ್ನು ತಡೆಯಲು ಸಾಧ್ಯವಾಗಲಿಲ್ಲ.
ಐಎನ್‍ಎಸ್ ವಿಕ್ರಾಂತ್ ಸಮುದ್ರ ಮಾರ್ಗದ ಮೂಲಕ ಯುದ್ಧ ಬಾಂಬರ್ಗಳ ಮೂಲಕ ಚಿತ್ತಗಾಂಗ್ ಮತ್ತು ಕಾಕ್ಸ್ ಬಜಾರ್ ಸೇರಿದಂತೆ ಪೂರ್ವ ಪಾಕಿಸ್ತಾನದ ಅನೇಕ ಕರಾವಳಿ ಪಟ್ಟಣಗಳ ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿ ದಾಳಿ ನಡೆಸಲು ಪಾಕಿಸ್ತಾನವು ತನ್ನ ಪಿಎನ್‍ಎಸ್ ಘಾಜಿ ಸಬ್ಮೆರಿನ್‍ಅನ್ನು ರವಾನಿಸಿತು. ಆದರೆ ಅದು ವಿಶಾಖಪಟ್ಟಣಂ ಕರಾವಳಿಯಲ್ಲಿ ನಿಗೂಢ ರೀತಿಯಲ್ಲಿ ಮುಳುಗಿತು.
ಭಾರತ-ಪಾಕಿಸ್ತಾನಕ್ಕೆ ತೀವ್ರ ನಷ್ಟ
ಡಿ. 9ರಂದು ಭಾರತದ ಐಎನ್‍ಎಸ್ ಖುಕ್ರಿಯನ್ನು ಪಾಕಿಸ್ತಾನದ ಪಿಎನ್‍ಎಸ್ ಹ್ಯಾಂಗೋರ್ ಅರೇಬಿಯನ್ ಸಮುದ್ರದಲ್ಲಿ ಮುಳುಗುವಂತೆ ಮಾಡಿತು. ಇದು ಭಾರತಕ್ಕಾದ ಬಹುದೊಡ್ಡ ನಷ್ಟ. ಇದರಿಂದ 18 ಅಧಿಕಾರಿಗಳು ಮತ್ತು 176 ನಾವಿಕರು ಮೃತಪಟ್ಟರು.
1971ರ ಯುದ್ಧದಲ್ಲಿ ಪಾಕಿಸ್ತಾದ ನೌಕಾಪಡೆ ತನ್ನ ಮೂರನೇ ಒಂದರಷ್ಟು ಶಕ್ತಿಯನ್ನು ಕಳೆದುಕೊಂಡಿತು. ಭಾರತವು ತನ್ನ ಕ್ಷಿಪ್ರ ಮತ್ತು ಅಚ್ಚರಿಯ ದಾಳಿಗಳ ಮೂಲಕ ಪಾಕಿಸ್ತಾನದ ಪಡೆಗಳ ಗೋಡೆಯನ್ನು ಭೇದಿಸಿತು.
ಈ ಯುದ್ಧ ಸುಮಾರು 13 ದಿನಗಳವರೆಗೆ ಮುಂದುವರಿಯಿತು. ಇದರಿಂದ ಪಾಕಿಸ್ತಾನವು ಅಪಾರ ಪ್ರಮಾಣದಲ್ಲಿ ತನ್ನ ನಾಗರಿಕರನ್ನು ಹಾಗೂ ಸೈನಿಕರನ್ನು ಕಳೆದುಕೊಂಡಿತು. ಕೊನೆಗೆ ಡಿ. 16ರಂದು ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಜನರಲ್ ಅಮಿರ್ ಅಬ್ದುಲ್ಲಾ ಖಾನ್ ನಿಯಾಜಿ ನೇತೃತ್ವದ 93,000 ಸೈನಿಕರ ಪಡೆಯು ಪೂರ್ವ ಪಾಕಿಸ್ತಾನದಲ್ಲಿ ಭಾರತೀಯ ಸೇನೆ-ಮುಕ್ತಿ ಬಾಹಿನಿ ಜಂಟಿ ಪಡೆಗೆ ಶರಣಾಯಿತು.
ಶರಣಾಗತಿಯ ಪತ್ರಕ್ಕೆ ಢಾಕಾದ ರಾಮ್ನಾ ರೇಸ್ ಕೋರ್ಸ್‍ನಲ್ಲಿ ಪಾಕಿಸ್ತಾನ ಸಹಿ ಹಾಕಿತು. ಪಾಕಿಸ್ತಾನದ ಸೈನಿಕರು ಮತ್ತು ಅವರ ಪರವಾಗಿದ್ದ ಪೂರ್ವ ಪಾಕಿಸ್ತಾನದ ನಾಗರಿಕರನ್ನು ಭಾರತ ಯುದ್ಧ ಕೈದಿಗಳನ್ನಾಗಿ ತನ್ನ ವಶಕ್ಕೆ ಪಡೆದುಕೊಂಡಿತು.
ಶಿಮ್ಲಾ ಒಪ್ಪಂದಕ್ಕೆ ಸಹಿ
ಯುದ್ಧದ ಸೋಲಿಗೆ ಕಾರಣಗಳನ್ನು ಅರಿಯಲು ರಚಿಸಲಾದ ಹಮೂದರ್ ರಹಮಾನ್ ಆಯೋಗವು, ಪಾಕಿಸ್ತಾನಿ ಜನರಲ್ ಗಳ ಮೇಲೆ ದೋಷಾರೋಪ ಮಾಡಿತು. ಕರ್ತವ್ಯ ನಿರ್ಲಕ್ಷ್ಯ, ಯುದ್ಧ ಅಪರಾಧ, ಸ್ಮಗ್ಲಿಂಗ್ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದರು ಎಂದು ಆರೋಪಿಸಿತು.
1972ರಲ್ಲಿ ಭಾರತ-ಪಾಕಿಸ್ತಾನ ನಡುವೆ ಶಿಮ್ಲಾ ಒಪ್ಪಂದ ನಡೆಯಿತು. ಭಾರತವು ಪಾಕಿಸ್ತಾನದಿಂದ ವಶಪಡಿಸಿಕೊಂಡಿದ್ದ ಕೆಲವು ಪ್ರದೇಶಗಳನ್ನು ಬಿಟ್ಟುಕೊಟ್ಟಿತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಬಾಂಗ್ಲಾದೇಶವನ್ನು ಸ್ವತಂತ್ರ ದೇಶವೆಂದು ಪರಿಗಣಿಸಿತು.
ಅಂದಿನ ಸೇನಾ ಮುಖ್ಯಸ್ಥ ಜಗಜೀತ್ ಸಿಂಗ್ ಅರೋರಾ ನೇತೃತ್ವದಲ್ಲಿ ಕ್ಷೀಪ್ರವಾಗಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನ ವಿಧಿಯಿಲ್ಲದೇ ಭಾರತದ ಮುಂದೆ ಮಂಡಿಯೂರಿ, ಬಾಂಗ್ಲಾ ವಿಮೋಚನೆಗೆ ಬದ್ದ ಎಂದು ಘೋಷಿಸಿತು.
1971ರ ಡಿ. 3ರಂದು ಆರಂಭವಾದ ಇಂಡೋ-ಪಾಕಿಸ್ತಾನ್ ಯುದ್ಧ 13 ದಿನಗಳವರೆಗೂ ನಡೆಯಿತು. ಬಳಿಕ ಭಾರತೀಯ ಸೇನೆಯ ಪ್ರಾಬಲ್ಯಕ್ಕೆ ಸೋತ ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಕ್ಕೆ ಶರಣಾಯಿತು.
ಭಾರತದ 11 ವಾಯುನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸುವುದರೊಂದಿಗೆ ಈ ಯುದ್ಧ ಆರಂಭವಾಯಿತು. ಪೂರ್ವಪಾಕಿಸ್ತಾನದಲ್ಲಿನ ಬಂಗಾಳಿ ಜನರ ಮೇಲೆ ಪಾಕಿಸ್ತಾನ ನಡೆಸುತ್ತಿದ್ದ ಹತ್ಯಾಕಾಂಡವನ್ನು ನಿಲ್ಲಿಸಲು ನಡೆದ ಈ ಯುದ್ಧದಲ್ಲಿ ಭಾರತ ಮತ್ತು ಪಾಕಿಸ್ತಾನಗಳು 3,800ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡವು.ಆದರೆ ಪಾಕಿಸ್ತಾನ ಭಾರತದಿಂದ ಮರೆಯದ ಪಾಠ ಕಲಿತು ತನ್ನ ಸಾವಿರಾರು ಸೈನಿಕರನ್ನು ಕಳೆದುಕೊಂಡಿತು.