ಬೆಳಗಾವಿ: ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ರಾಜ್ಯಕ್ಕೆ ಕಳಂಕ ಬಂದಿದೆ ಜನ ಬೇಸತ್ತು ಈ ಸರ್ಕಾರವನ್ನು ಬದಲಾವಣೆ ಮಾಡಬೇಕೆಂದು ಬಯಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಈ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಶೇ.40ರಷ್ಟು ಕಮಿಷನ್ ಪಡೆಯುತ್ತಿರುವ ಬಗ್ಗೆ ಗುತ್ತಿಗೆದಾರರ ಸಂಘ ಲಿಖಿತವಾಗಿ ದೂರು ನೀಡಿರುವ ಬಗ್ಗೆ ಪುರಾವೆಗಳಿವೆ. ಈ ಹಿಂದೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದಾಗ ಯಾವುದೇ ದಾಖಲೆಗಳು ಇರಲಿಲ್ಲ ಎಂದು ಹೇಳಿದರು.
ವಿಧಾನಪರಿಷತ್ ಸೇರಿದಂತೆ ಹಲವಾರು ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡಿದೆ. ಜನ ಬಿಜೆಪಿಯನ್ನು ತಿರಸ್ಕರಿಸುತ್ತಿದ್ದಾರೆ. ಅದನ್ನು ಮರೆಮಾಚಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಕಾಯ್ದೆ ಜಾರಿಯಲ್ಲಿರುವುದರಿಂದ ಹೊಸ ಕಾಯ್ದೆಯ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.
ಬುಧವಾರ ವಿಧಾನಪರಿಷತ್ನಲ್ಲಿ 15 ಮಂದಿ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸುವ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ. ಭ್ರಷ್ಟ ಸಚಿವರ ಬಗ್ಗೆ ಚರ್ಚಿಸಲು ಅವಕಾಶ ನೀಡಿ ಎಂದರೆ ಅಮಾನತುಗೊಳಿಸಲಾಗಿದೆ. ಇದೇನು ಪ್ರಜಾಪ್ರಭುತ್ವವೇ ಎಂದು ಕಿಡಿಕಾರಿದರು.
ಅತ್ಯಂತ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ನಡೆದುಕೊಳ್ಳುತ್ತಿರುವ ರೀತಿ ಸರಿ ಇದೆಯಾ, ಹೆಣ್ಣು ಮಗಳೊಬ್ಬನ್ನು ಸಭಾಪತಿ ಪೀಠದಲ್ಲಿ ಕೂರಿಸಿ ಅಮಾನತುಗೊಂಡ ಸದಸ್ಯರ ಹೆಸರನ್ನು ಹೇಳಿಸುತ್ತಾರೆ. ನಾವು ಬೆಳಗಾವಿಗೆ ಬಂದಿರುವುದು ಧರಣಿ ಮಾಡುವುದಕ್ಕಲ್ಲ. ಜನರ ಸಮಸ್ಯೆಗೆ ದನಿಯಾಗಲಿಕ್ಕೆ ಎಂದು ಹೇಳಿದರು.
ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜ್ಯದ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೆರೆ ಸಂತ್ರಸ್ತರಿಗೆ ಈ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ. ಕೃಷಿ ಸಮಸ್ಯೆಗಳು ಹೆಚ್ಚಾಗಿವೆ. ದಿನಕ್ಕೊಂದು ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಚರ್ಚೆ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.