ಬೆಳಗಾವಿ:ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವ ಸರ್ಕಾರದ ನಿರ್ಧಾರದ ಹಿಂದೆ ದುರುದ್ದೇಶ ಅಡಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ತರುವ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಸುತ್ತೇನೆ ಎಂದು ತಿಳಿಸಿದರು.
ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆ ಹಿಂದೆ ಜನರ ಹಿತವೇನೂ ಇಲ್ಲ. ದೇಶದ ಕೋಮು ಸೌಹಾರ್ದ ಹಾಳು ಮಾಡುವುದೇ ಇದರ ಉದ್ದೇಶ ಎಂದು ಕಿಡಿಕಾರಿದರು.
ಸಂವಿಧಾನದ ಪ್ರಕಾರ ದೇಶದ ಪ್ರಜೆ ತನ್ನ ಆಸಕ್ತಿ ಹಾಗೂ ಇಚ್ಚೆಗೆ ಸೂಕ್ತವಾದ ಧರ್ಮವನ್ನು ಆರಿಸಿಕೊಳ್ಳುವ, ಪಾಲಿಸುವ ಮತ್ತು ಸಂಭ್ರಮಿಸುವ ಹಕ್ಕು ಇದೆ. ಇದಕ್ಕೆ ವಿರುದ್ಧವಾಗಿ ಸರ್ಕಾರ ಕಾನೂನು, ಕಾಯಿದೆ ತರುವುದು ಸಂವಿಧಾನಬಾಹಿರ, ತಮಗೆ ಬಹುಮತ ಇದೆ ಎನ್ನುವ ಕಾರಣಕ್ಕೆ ಸಂವಿಧಾನದ ಮೇಲೆ ಸವಾರಿ ಮಾಡುವ ಹಾಗೂ ತಮಗೆ ಬೇಕಾದ ಕಾಯಿದೆಗಳನ್ನು ಜಾರಿಗೆ ತರುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು ಎಂದು ಸಿದ್ದು ಸಲಹೆ ನೀಡಿದರು.