ಕ್ರಿಸ್ಮಸ್, ಹೊಸ ವರ್ಷಚಾರಣೆಗೆ ನಿರ್ಬಂಧ ಹಾಕಿ: ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು

ಬೆಂಗಳೂರು:ರಾಜ್ಯದಲ್ಲಿ ಓಮಿಕ್ರಾನ್  ಸೋಂಕು ಹೆಚ್ಚಾಗುತ್ತಿರುವ ಕಾರಣ ಕ್ರಿಸ್‍ಮಸ್ ಮತ್ತು ಹೊಸ ವರ್ಷಚಾರಣೆಗೆ ನಿರ್ಬಂಧ ಹಾಕುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಭಾರತದಲ್ಲಿ ಒಮಿಕ್ರಾನ್ ಸೋಂಕು 3ನೇ ಅಲೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮೂರನೇ ಅಲೆ ತಡೆಯಲು ಡಿಸೆಂಬರ್-ಜನವರಿ ನಿರ್ಣಾಯಕವಾಗಿದ್ದು, ಕಡಿವಾಣ ಹಾಕುವುದು ಅನಿವಾರ್ಯ‌ ಎಂದು ತಜ್ಞರು ಹೇಳಿದ್ದಾರೆ.

ಡಿಸೆಂಬರ್-ಜನವರಿಯಲ್ಲೇ ಹೆಚ್ಚು ಆರ್ಥಿಕ ವ್ಯವಹಾರದಿಂದ ಹಿಡಿದು ಹಬ್ಬ-ಹರಿದಿನಗಳು ಶುರುವಾಗಲಿದೆ, ಜನರ ಚಟುವಟಿಕೆ ಹಾಗೂ ಓಡಾಟಗಳು ಹೆಚ್ಚಾಗಲಿವೆ. ಗುಂಪು ಸೇರುವುದು ಹೆಚ್ಚಾದರೆ ಸೋಂಕು ಹರಡುವಿಕೆಗೆ ಕಾರಣವಾಗಲಿದೆ  ತಾಂತ್ರಿಕ ಸಲಹಾ ಸಮಿತಿ ಆತಂಕ ವ್ಯಕ್ತಪಡಿಸಿದೆ.

ಒಂದು ವೇಳೆ ಹೊಸ ವರ್ಷದಂದು ಒಳಾಂಗಣ ಹಾಗೂ ಹೊರಾಂಗಣ ಆಚರಣೆಗಳಿಗೆ ಅನುಮತಿ  ನೀಡಿದರೆ ಇದಕ್ಕಾಗಿ ಮಾರ್ಗಸೂಚಿ ಜಾರಿ ಮಾಡಬೇಕು  ದೇವಸ್ಥಾನ, ಚರ್ಚ್, ಮಸೀದಿಗೂ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಸಲಹೆ ಬಂದಿದೆ.

ದೇವಸ್ಥಾನ ಸೇರಿದಂತೆ ಇತರೆಡೆಗೆ ಹೋಗಲು ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಮಾಡಬೇಕು. ಪಬ್ ಕ್ಲಬ್‍ಗಳಲ್ಲಿ ಕೇವಲ 50 ಮಂದಿಗೆ ಮಾತ್ರ ಅವಕಾಶ ಕಲ್ಪಿಸಬೇಕು

ದೇಗುಲ, ಚರ್ಚ್, ಮಸೀದಿಗಳಲ್ಲಿ ಅಂತರ ಕಾಪಾಡಿಕೊಳ್ಳಲು ಮಾರ್ಷಲ್‍ಗಳ ನಿಯೋಜನೆ ಮಾಡಬೇಕು,  ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸುವಂತೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.