ಭಯೋತ್ಪಾದನೆ ಸೃಷ್ಟಿಸುವ ಶಕ್ತಿಗಳ ಮೂಲೋತ್ಪಾಟನೆ ಮಾಡಿ -ಹೆಚ್.ಡಿ.ಕೆ

ಬೆಂಗಳೂರು: ಬೆಳಗಾವಿಯಲ್ಲಿ ತಡರಾತ್ರಿ ಪುಂಡರು ನಡೆಸಿರುವ ದಾಂಧಲೆಯನ್ನು  ಮಾಜಿ ಮುಖ್ಯಮಂತ್ರಿ  ಹೆಚ್.ಡಿ.ಕುಮಾರಸ್ವಾಮಿ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.

ಈ ಕುರಿತು ‌ಟ್ವೀಟ‌್ ಮಾಡಿರುವ ಅವರು, ಬೆಳಗಾವಿಯಲ್ಲಿ ನಡೆಯುತ್ತಿರುವ ಇಂಥ ಭಯೋತ್ಪಾದನೆಯನ್ನು ಕೊನೆಗಾಣಿಸಬೇಕಾಗಿದೆ ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ಪುಂಡರ ಹೆಡೆಮುರಿ ಕಟ್ಟಿ ತಕ್ಕ ಶಾಸ್ತಿ ಮಾಡಬೇಕು. ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ತಡರಾತ್ರಿ ಪುಂಡರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವುದು ಅಕ್ಷಮ್ಯ. ವಿಧಾನಮಂಡಲ ಅಧಿವೇಶನಕ್ಕೆ ಹೋಗಲು ಪಾಸ್ ಅಂಟಿಸಲಾಗಿದ್ದ ವಾಹನಗಳನ್ನೇ ಗುರಿ ಮಾಡಲಾಗಿದೆ. ಕನ್ನಡಿಗರ ಹೆಮ್ಮೆಯಾದ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಹಾಳು ಮಾಡಿರುವುದು ಕ್ಷಮಾರ್ಹವಲ್ಲದ ಅಪರಾಧಹಾಗೂ ಖಂಡನೀಯ ಎಂದಿದ್ದಾರೆ.

ಬೆಳಗಾವಿಯಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಿ ಭಾಷಾ ವೈಷಮ್ಯವನ್ನು ಹೆಚ್ಚಿಸುವುದು ದುರುಳರ ಉದ್ದೇಶವಿದ್ದಂತಿದೆ. ಶಾಂತಿಯನ್ನು ಕದಡಿ ಜನರಲ್ಲಿ ಭೀತಿ ಉಂಟು ಮಾಡುತ್ತಿರುವವರು ಹಾಗೂ ಇಂತಹ ಪುಂಡರನ್ನು ಪ್ರಚೋದಿಸಿದವರನ್ನು ಹೊರಗೆಳೆದು ಶಿಕ್ಷಿಸಬೇಕು ಎಂದು ಹೇಳಿದ್ದಾರೆ.

ಬೆಳಗಾವಿ ವಿವಾದ ಮುಗಿದ ಅಧ್ಯಾಯ. ಆದಾಗ್ಯೂ ಕೆಲ ವಿಚ್ಛಿಧ್ರಕಾರಿ ಶಕ್ತಿಗಳು ಆ ಭಾಗದಲ್ಲಿ ಅಶಾಂತಿ ಸೃಷ್ಟಿಸುತ್ತ ಕನ್ನಡಿಗರು-ಮರಾಠಿಗರ ನಡುವೆ ವೈಷಮ್ಯಕ್ಕೆ ಕಾರಣವಾಗುತ್ತಿದ್ದಾರೆ. ಅಂಥ ಶಕ್ತಿಗಳನ್ನು ಸರಕಾರ ಮೂಲೋತ್ಪಾಟನೆ ಮಾಡಬೇಕು ಎಂದಿದ್ದಾರೆ.

ಬೆಳಗಾವಿಯಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿರುವ ಈ ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರುವುದಿಲ್ಲ. ಕನ್ನಡಿಗರ ಶಕ್ತಿ ಏನೆಂದು ತೋರಿಸುವ ಕಾಲ ಈಗ ಬಂದಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ  ಹೇಳಿದ್ದಾರೆ.