ಬೆಂಗಳೂರು: ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ವರ ಪ್ರತಿಮೆ ಭಗ್ನಗೊಳಿಸಿರುವ ಘಟನೆಗೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕರವೇ ಪ್ರವೀಣ್‍ಕುಮಾರ್ ಶೆಟ್ಟಿ ಬಣ, ಕರ್ನಾಟಕ ರಕ್ಷಣವೇ ವೇದಿಕೆಯ ನಾರಾಯಣ ಗೌಡ, ಜಯಕರ್ನಾಟಕ ಸಂಘಟನೆಯ ಜಗದೀಶ್, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಾ.ರಾ.ಗೋವಿಂದ್ ಸೇರಿದಂತೆ ಅನೇಕ ಮುಖಂಡರು ಘಟನೆಯನ್ನು ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿ ಸರ್ಕಾರಿ ವಾಹನಗಳನ್ನು ಜಖಂಗೊಳಿಸಿರುವ ಎಂ.ಇ.ಎಸ್ ಪುಂಡರ ಮೇಲೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕನ್ನಡಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಬೆಂಗಳೂರಿನ ಗಾಂಧಿನಗರದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಪ್ರವೀಣ್‍ಕುಮಾರ್ ಶೆಟ್ಟಿ ಬಣ, ಎಂಇಎಸ್ ಸಂಘಟನೆ ಪ್ರತಿ ಬಾರಿ ಶಾಂತಿ ಕದಡುವ ಯತ್ನ ನಡೆಸುತ್ತಿದೆ. ಅವೇಶನ ಸಂದರ್ಭದಲ್ಲಿ , ರಾಜ್ಯೋತ್ಸವ ಸಂದರ್ಭದಲ್ಲಿ ಇಂಥ ಕೃತ್ಯಗಳನ್ನು ನಡೆಸುತ್ತಿವೆ.ಕೂಡಲೆ ಈ ಸಂಘಟನೆಯನ್ನು ನಿಷೇಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ನಡೆದಿರುವ ಘಟನೆಯನ್ನು ಖಂಡಿಸಿ ಬೆಳಗಾವಿ ಚಲೋ ನಡೆಸುತ್ತೇವೆ ಎಂದು ಪ್ರವೀಣ್ ಶೆಟ್ಟಿ ಹೇಳಿದರು.
ಘಟನೆಯನ್ನು ಉಗ್ರವಾಗಿ ಖಂಡಿಸಿದ ವಾಟಾಳ್ ನಾಗರಾಜ್, ಮೊದಲಿನಿಂದಲೂ ನಾವು ಎಂಇಎಸ್ ಧೋರಣೆಯನ್ನು ಖಂಡಿಸುತ್ತಲೇ ಬಂದಿದ್ದೇವೆ. ಅವರ ಉದ್ದಟತನದ ವರ್ತನೆ ಮೇರೆ ಮೀರಿದೆ. ಸರ್ಕಾರಗಳು ಕಾಲಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳದೆ ಇರುವುದೇ ಅವರು ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಸಂಗೊಳ್ಳಿ ರಾಯಣ್ಣ ಅವರಿಗೆ ಅವಮಾನ ಮಾಡಿ ರಾಜ್ಯಕ್ಕೆ ಕೆಟ್ಟ ಹೆಸರು ತಂದಿರುವ ಎಂಇಎಸ್ ಸಂಘಟನೆಯನ್ನು ಸಂಪೂರ್ಣ ನಿಷೇಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯೋತ್ಸವ ಸಂದರ್ಭದಲ್ಲಿ ಪ್ರತ್ಯೇಕ ಧ್ವಜ ಹಾರಿಸಲು ಮುಂದಾಗುವುದು, ಶಾಂತಿ ಸೌಹಾರ್ದತೆಗೆ ಧಕ್ಕೆ ತರುವುದು, ಕಿಡಿಗೇಡಿ ಕೃತ್ಯಗಳನ್ನು ಮಾಡುವ ಮೂಲಕ ಕಳಂಕ ತರುವ ಕೆಲಸವನ್ನು ಎಂಇಎಸ್ ನಿರಂತರವಾಗಿ ಮಾಡುತ್ತಾ ಬಂದಿದೆ. ಅದಕ್ಕೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ ಎಂದು ಸಾ.ರಾ.ಗೋವಿಂದ್ ಗುಡುಗಿದ್ದಾರೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಪ್ರತಿಕ್ರಿಯಿಸಿ ಎಂಇಎಸ್‍ಗೆ ಬೆಳಗಾವಿಯಲ್ಲಿ ಅಸ್ತಿತ್ವ ಇಲ್ಲದಂತಾಗಿದೆ. ಅಸ್ತಿತ್ವಕ್ಕಾಗಿ ಇಂತಹ ದುಷ್ಕೃ ತ್ಯಗಳನ್ನು ಮಾಡುತ್ತಿದೆ. ಇದನ್ನು ನಾಡಿನ ಜನ ಸಹಿಸುವುದಿಲ್ಲ.
ಕನ್ನಡಪರ ಸಂಘಟನೆಗಳು ತಕ್ಕ ಉತ್ತರ ನೀಡಲಿವೆ ಎಂದು ಎಚ್ಚರಿಸಿದರು.
ಶಿವಾಜಿ ಮಹಾರಾಜರಿಗೆ ಮಸಿ ಬಳಿದಿರುವ ಘಟನೆ, ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ವಿರೂಪಗೊಳಿಸಿರುವ ಘಟನೆ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಈ ಘಟನೆಯ ಹಿಂದಿರುವ ದುಷ್ಟಶಕ್ತಿಗಳ ವಿರುದ್ಧವೂ ಕೂಡ ಸರ್ಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.