ವೈದ್ಯ ಸೀಟು ಹಂಚಿಕೆ ವಿಳಂಬ: ಸುಪ್ರೀಂ ಕೋರ್ಟ್ ಮೊರೆ ಹೋಗಲು ಹೆಚ್.ಡಿ.ಕೆ ಆಗ್ರಹ

ಬೆಂಗಳೂರು: ವೈದ್ಯ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿರುವ ಬಗ್ಗೆ ಕೇಂದ್ರ ಸರಕಾರದ ವಿರುದ್ಧ  ಮಾಜಿ ಮುಖ್ಯಮಂತ್ರಿ ಟೀಕಾಪ್ರಹಾರ ನಡೆಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ ಅವರು; ರಾಜ್ಯ ಸರಕಾರ ಕೂಡಲೇ ಸುಪ್ರೀಂ ಕೋರ್ಟ್‌ʼಗೆ ಅರ್ಜಿ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ವೈದ್ಯ ಸೀಟುಗಳ ಹಂಚಿಕೆ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಸರಕಾರಗಳೇ ಮ್ಯಾನೇಜ್‌ ಮೆಂಟುಗಳಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ದೂರಿದ್ದಾರೆ.

ವೈದ್ಯ ಶಿಕ್ಷಣವನ್ನು ಹಳ್ಳಿ ವಿದ್ಯಾರ್ಥಿಗಳಿಗೆ ʼನೀಟಾಗಿʼ ತಪ್ಪಿಸುವ ಹುನ್ನಾರ ನಡೆಯುತ್ತಿದೆಯೆ ಎಂಬ ಅನುಮಾನ ಕಾಡುತ್ತಿದೆ. ಕೇಂದ್ರ ಸರಕಾರಕ್ಕೆ ʼನೀಟ್‌ʼ ವ್ಯವಸ್ಥೆಯನ್ನು ಹಾಳು ಮಾಡುವ ಬಗ್ಗೆ ಇದ್ದ ಉತ್ಸಾಹ ಇದನ್ನು ಸರಿ ಮಾಡುವ ಕಡೆ ಇಲ್ಲ ಎಂಬುದು ವಿದ್ಯಾರ್ಥಿಗಳಿಗೆ ಮನವರಿಕೆಯಾಗಿದೆ ಎಂದಿದ್ದಾರೆ.

ನಾಲ್ಕು ತಿಂಗಳಿನಿಂದ ವೈದ್ಯ ಸೀಟುಗಳು ಹಂಚಿಕೆಯಾಗಿಲ್ಲ, ಪರಿಣಾಮ ಎಂಜಿನಿಯರಿಂಗ್‌ ಕೌನ್ಸೆಲಿಂಗ್‌ ಕೂಡ ತಡವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸಮರ್ಪಕ ನಿರ್ವಹಣೆ, ಅದಕ್ಷತೆಗೆ ಇದು ಹಿಡಿದ ಕನ್ನಡಿ ಕಿಡಿಕಾರಿದ್ದಾರೆ.

ಉನ್ನತ ಶಿಕ್ಷಣ ಉಳ್ಳವರಿಗೆ ಮಾತ್ರವೇ? ಇದೇ ಸತ್ಯ ಎನ್ನುವಂತೆ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ. ಗುಣಮಟ್ಟದ ಕೋಚಿಂಗ್‌ಪಡೆಯಲು ಶಕ್ತಿ ಇಲ್ಲದ, ಆರ್ಥಿಕವಾಗಿ ದುರ್ಬಲರಾದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯ ಶಿಕ್ಷಣವನ್ನು ಶಾಶ್ವತವಾಗಿ ತಪ್ಪಿಸುವ ದುರಾಲೋಚನೆ  ಇದ್ದಂತಿದೆ ಎಂದು ಹೇಳಿದ್ದಾರೆ.

ನೀಟ್‌ ವಿಳಂಬದಿಂದ ವೈದ್ಯ, ಎಂಜಿನಿಯರಿಂಗ್‌ ಸೀಟುಗಳ ʼಕಾಳಸಂತೆ ಬಿಕರಿʼಗೆ ಸರಕಾರಗಳೇ ಅವಕಾಶ ಮಾಡಿಕೊಟ್ಟಂತೆ ಆಗಿದೆ. ಇದ್ಯಾವ ಸೀಮೆ ಶಿಕ್ಷಣ ನೀತಿ ಎಂದು ಎಚ್.ಡಿ.ಕೆ.ಪ್ರಶ್ನಿಸಿದ್ದಾರೆ.

ರಾಜ್ಯ ಸರಕಾರ ಕೂಡಲೇ ಸುಪ್ರೀಂ ಕೋರ್ಟ್‌ʼಗೆ ಮನವಿ ಸಲ್ಲಿಸಿ ತ್ವರಿತ ತೀರ್ಪು ನೀಡುವಂತೆ ಮನವಿ ಮಾಡಬೇಕು, ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.