ಬೆಳಗಾವಿ:ನಾನೇ ಮುಖ್ಯಮಂತ್ರಿ ಅಂತ ಹೇಳಿಕೊಂಡು ಓಡಾಡುವರ ಸಂಖ್ಯೆ ಹೆಚ್ಚಾಗಿದೆ. ಅಂತವರನ್ನೇನಾದ್ರು ಸಿಎಂ ಮಾಡಿದ್ರೆ ವಿಧಾನಸೌಧ ಬೇರೆ ರೀತಿ ಆಗಿಬಿಡುತ್ತೆ ಎನ್ನುವ ಮೂಲಕ ಮತ್ತೆ ಪರೋಕ್ಷವಾಗಿ ಸಚಿವ ಮುರಗೇಶ್ ನಿರಾಣಿ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಯತ್ನಾಳ್ ಅವರು ಯಾರದ್ದೋ ಬಾಲಂಗೋಚಿ ಆಗಿ ಕೆಲಸ ಮಾಡೋದಲ್ಲ. ತನ್ನನ್ನ ಸಿಎಂ ಅಭ್ಯರ್ಥಿ ಅಂತ ಘೋಷಿಸಿದ್ರೆ, ನನ್ನ ಬೆಂಬಲಕ್ಕೆ ಇಡೀ ಬಿಜೆಪಿ ನಿಲ್ಲಲಿದೆ ಎಂದು ಹೇಳುವ ಮೂಲಕ ಮುರುಗೇಶ ನಿರಾಣಿಗೆ ಟಾಂಗ್ ಕೊಟ್ಟರು.
ಮಹಾರಾಷ್ಟ್ರದಲ್ಲಿ ನಡೆದ ಗಲಭೆ ವಿಚಾರಕ್ಕೆ ಪ್ರತಿಕ್ರಯಿಸಿದ ಯತ್ನಾಳ್, ಇದರ ಹಿಂದೆ ರಾಷ್ಟ್ರೀಯ ಪಕ್ಷದ ಕೈವಾಡ ಇದೆ. ದೊಡ್ಡ ಷಡ್ಯಂತ್ರ ಇದೆ. ಬೊಮ್ಮಾಯಿ ಸರ್ಕಾರಕ್ಕೆ ಮಸಿ ಬಳಿಯೋ ಕೆಲಸ ಮಾಡಲಾಗುತ್ತಿದೆ. ಅಂತವರಿಗೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಇಷ್ಟೆಲ್ಲ ಸೆಕ್ಯುರಿಟಿ ಇರುವಾಗಲೂ ಬಂದು ಕಲ್ಲು ಹೊಡೆದು ಪುಂಡಾಟಿಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಎಸ್ಡಿಪಿಐ ಬ್ಯಾನ್ ಮಾಡಬೇಕು ಎಂಬ ಒತ್ತಾಯವಿದೆ, ಕಾನೂನಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಎಂಇಎಸ್ ಮರಾಠಾ ಸಮುದಾಯಕ್ಕೆ ಸೇರಿದ್ದಲ್ಲ ಎಂದರು.
ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಗೆ ಏನಾಯ್ತು. ಹಿಂದೆ ಐದು ಸೀಟ್ ಪಡೆದಿದ್ರು. ಈಗ ಒಂದು ಸೀಟೂ ಪಡೆದಿಲ್ಲ. ಮರಾಠಿ ಭಾಷಿಕರೇ ಎಂಇಎಸ್ ಅನ್ನು ತಿರಸ್ಕರಿಸಿದ್ದಾರೆ ಈಗಲಾದರೂ ಬುದ್ದಿ ಬರಬೇಡವೆ ಎಂದು ಯತ್ನಾಳ್ ಗುಡುಗಿದರು.