ಮತ್ತೆ ಎಂ ಇ ಎಸ್ ಪುಂಡರ ಉದ್ಧಟತನ: ಸಾರಿಗೆ ಬಸ್ ಗೆ ಕಲ್ಲು

ಕಲಬುರಗಿ: ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರ ಅಟ್ಟಹಾಸ ಮುಂದುವರೆದಿದ್ದು, ಕಲ್ಯಾಣ ಕರ್ನಾಟಕದ ಸಾರಿಗೆ ಬಸ್ ತಡೆದು, ಕಪ್ಪು ಮಸಿ ಬಳಿದು  ಉದ್ಧಟತನ ಮೆರೆದಿದ್ದಾರೆ.

ಮುಂಬೈನಿಂದ ಕಲಬುರಗಿಗೆ ಬರುತ್ತಿದ್ದ ಸಾರಿಗೆ ಬಸ್ ತಡೆದ ಎಂಇಎಸ್ ಕಿಡಿಗೇಡಿಗಳು, ಬಸ್ ಮೇಲೆ ಜೈ ಶಿವಾಜಿ ಎಂದು ಬರೆದಿದ್ದಾರೆ. ಅಲ್ಲದೆ ಬಸ್ ಮುಂಭಾಗದಲ್ಲಿ ಎಂಇಎಸ್ ಧ್ವಜ ಕಟ್ಟಿ ಬಸ್ ಗೆ ಕಪ್ಪು ಮಸಿ ಬಳಿದಿದ್ದಾರೆ. ನಂತರ ಚಾಲಕನ ಕೈಗೆ ಎಂಇಎಸ್ ಧ್ವಜ ನೀಡಿ ಜೈ ಶಿವಾಜಿ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ.

ಎಂ ಇ ಎಸ್ ನವರ ಈ ಪುಂಡಾಟಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಂಇಎಸ್ ಕಾರ್ಯಕರ್ತರ ವಿಕೃತಿ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.

ಎಂಇಎಸ್ ಕಿಡಿಗೇಡಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡಿಗರು ಆಗ್ರಹಿಸಿದ್ದಾರೆ.