ಬೆಳಗಾವಿ: ವಿವಾದಿತ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಕುರಿತು ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಯುವ ಹಿನ್ನೆಲೆಯಲ್ಲಿ ಸುವರ್ಣಸೌಧಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಹೇರಲಾಗಿದೆ.
ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಪೊಲೀಸ್ ಮೇಲಾಧಿಕಾರಿಗಳು ಸೂಚಿಸಿದ್ದು ನರ್ಬಂಧ ವಿರೋಧಿಸಿ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.
ಎಸ್ಪಿ ಸೂಚನೆ ಮೇರೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಈ ವೇಳೆ ಸುವರ್ಣಸೌಧ ನಿಯೋಜಿತ ಪೊಲೀಸರು ಹೇಳಿದ್ದಾರೆ.
ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮ ಪ್ರತಿನಿಧಿಗಳಿಗೆ ಸುವರ್ಣಸೌಧ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಮಾಧ್ಯಮ ಪ್ರತಿನಿಧಿಗಳು ಕಾರಿಡಾರ್, ಲಾಂಜ್ಗಳಲ್ಲಿ ಓಡಾಡದಂತೆ ನಿರ್ಬಂಧಿಸಲಾಗಿದ್ದು,ಸುವರ್ಣಸೌಧದ ಮುಂಭಾಗ ಬಿಟ್ಟು ಬೇರೆ ಎಲ್ಲೂ ಹೋಗುವಂತಿಲ್ಲ.
ಕ್ಯಾಮೆರಾಗಳು ಸುವರ್ಣ ವಿಧಾನಸೌಧ ಪ್ರವೇಶ ಮಾಡುವಂತಿಲ್ಲ.
ಯಾವುದೇ ಗೇಟ್ನಿಂದಲೂ ಕ್ಯಾಮೆರಾ ಒಳ ಪ್ರವೇಶಿಸುವಂತಿಲ್ಲ.ಹಾಗಾಗಿ ಮಾಧ್ಯಮ ಪ್ರತಿನಿಧಿಗಳು ಸುವರ್ಣಸೌಧದ ಪಶ್ಚಿಮ ದ್ವಾರದ ಮುಂದೆ ಪ್ರತಿಭಟನೆ ನಡೆಸಿದರು.
ಈ ಕುರಿತು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ ನಾನು ನಿರ್ಬಂಧ ಹೇರಿ ಎಂದು ಯಾರಿಗೂ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರಾ ಅವರಿಗೂ ಈ ಬಗ್ಗೆ ಮಾಹಿತಿ ಕೇಳಿದ್ದೇನೆ. ಅವರು ನಮ್ಮ ಕಡೆಯಿಂದ ಯಾವುದೇ ಸೂಚನೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ನಿರ್ಬಂಧ ಸೂಚನೆ ಹಿಂದೆ ಯಾರಿದ್ದಾರೆ ಎಂಬ ಸತ್ಯಾಸತ್ಯತೆ ತಿಳಿದುಕೊಳ್ಳುತ್ತೇನೆ. ಎಂದಿನಂತೆ ಮಾಧ್ಯಮ ಪ್ರತಿನಿಧಿಗಳು ಓಡಾಡಬಹುದು ಎಂದು ಕಾಗೇರಿ ತಿಳಿಸಿದರು.