ಚಾಮರಾಜನಗರ:ಉದ್ಯೋಗ ಮೇಳದಿಂದ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಕ್ಯಾಂಪೇನ್ ಕಾರ್ಯಕ್ರಮದಡಿ ಗ್ರಾಮೀಣ ನಿರುದ್ಯೋಗಿ ಯುವಕ, ಯುವತಿಯರಿಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಕಾರಣದಿಂದಾಗಿ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಉದ್ಯೋಗ ಮೇಳ ಆಯೋಜನೆ ಯಾಗಿರಲಿಲ್ಲ ಎಂದು ಹೇಳಿದರು.
ಹಲವಾರು ಕಾರಣಗಳಿಂದಾಗಿ ಉದ್ಯೋಗ ತೊರೆದು ಜಿಲ್ಲೆಗೆ ಹಿಂತಿರುಗಿ ಬಹಳಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ತಿಳಿಸಿದರು.
ಪದವಿ, ಸ್ನಾತಕೋತ್ತರ ಪದವಿಧರರಾಗಿದ್ದರೂ ಸಹ ಉದ್ಯೋಗವಕಾಶಗಳು ಲಭ್ಯವಿರುವುದಿಲ್ಲ. ಹೀಗಾಗಿ 8ನೇ ತರಗತಿ ಯಿಂದ ಉನ್ನತ ವ್ಯಾಸಂಗ ಮಾಡಿರುವ ಎಲ್ಲಾ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲೆಂದೇ ಈ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಒಟ್ಟು 26 ಸಂಸ್ಥೆಗಳು ಮೇಳದಲ್ಲಿ ಭಾಗಿಯಾಗಿವೆ. 535 ಅಭ್ಯರ್ಥಿಗಳು ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಎಲ್ಲರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಒಟ್ಟಾರೆ ಉದ್ಯೋಗಮೇಳ ಯಶಸ್ವಿಯಾಗಲಿ ಎಂದು ಕೆ.ಎಂ. ಗಾಯತ್ರಿ ಹಾರೈಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‍ರಾಜ್ ಅವರು ಮಾತನಾಡಿ ದೇಶದ ಜನಸಂಖ್ಯೆಯಲ್ಲಿ ಶೇ. 35ರಷ್ಟು ನಿರುದ್ಯೋಗಿಗಳಿದ್ದಾರೆ. ಅಲ್ಲದೇ ಸಣ್ಣ ಉದ್ಯೋಗದಲ್ಲಿ ತೊಡಗಿರುವ ಸಾಕಷ್ಟು ಜನರಿಗೆ ಉದ್ಯೋಗ ಭದ್ರತೆ ಇಲ್ಲ ಎಂದು ವಿಷಾದಿಸಿದರು.
ಇತ್ತೀಚಿನ ದಿನಗಳಲ್ಲಿ ಉದ್ಯೋಗವಕಾಶಗಳು ಹೇರಳವಾಗಿವೆ ಹಾಗೂ ಎಲ್ಲರಿಗೂ ಮುಕ್ತವಾಗಿವೆ. ಪ್ರತಿಯೊಬ್ಬರು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಸ್ವಂತ ಉದ್ಯೋಗದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಜಿ ಪಂ ಯೋಜನಾ ನಿರ್ದೇಶಕರಾದ ಕೃಷ್ಣರಾಜು, ಮುಖ್ಯ ಲೆಕ್ಕಾಧಿಕಾರಿ ಮಿಲನಾ, ಕೈಗಾರಿಕಾ ಇಲಾಖೆಯ ಜಂಟಿನಿರ್ದೇಶಕ ರಾಜೇಂದ್ರಪ್ರಸಾದ್, ಎಸ್.ಬಿ.ಐ ಮಾರ್ಗದರ್ಶಿ ಬ್ಯಾಂಕ್‍ನ ವ್ಯವಸ್ಥಾಪಕ ಶ್ರೀಕಾಂತ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಅರುಣ್ ಕುಮಾರ್, ಜಿ ಪಂ ಎನ್.ಆರ್.ಎಲ್.ಎಂ ವ್ಯವಸ್ಥಾಪಕರಾದ ಗೋವಿಂದರಾಜು ಮತ್ತಿತರರು ಭಾಗವಹಿಸಿದ್ದರು.