ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಮಾರಾಟ ಜಾಲ ಭೇದಿಸಿದ ಆಹಾರ ಇಲಾಖೆ

ಚಾಮರಾಜನಗರ:ಕಲಬೆರಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಆಹಾರ ಇಲಾಖೆ ಪತ್ತೆಹಚ್ಚಿದೆ.

ಈ ಸಂಬಂಧ ತಮಿಳುನಾಡು ಮೂಲದ ಕಾರ್ತಿ, ಈಶ್ವರ್‌ಮೂರ್ತಿ, ರವಿ, ಬಿಹಾರ ಮೂಲದ ರಾಜು ಹಾಗೂ ಚಾಮರಾಜನಗರದ ಪೃಥ್ವಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಆರೋಪಿಗಳು ಕಡಿಮೆ ಹಣಕ್ಕೆ ನೀಡುವುದಾಗಿ ಆಮಿಷ ಒಡ್ಡಿ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನಗಳಾದ ಆಯಿಲ್, ಡೀಸೆಲ್ ಮಾರಾಟ ಮಾಡುತ್ತಿದ್ದರು.

ಜಾಲವನ್ನು ಆಹಾರ ಇಲಾಖೆ  ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಪತ್ತೆಹಚ್ಚಿದೆ.

ಕೊತ್ತಲವಾಡಿ ಗ್ರಾಮದ ಕೃಷ್ಣ ಗ್ರಾನೈಟ್​​ಗೆ ಡೀಸೆಲ್ ಇಳಿಸುವಾಗ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ನೇತೃತ್ವದಲ್ಲಿ ರಾಜಣ್ಣ ಹಾಗೂ ಮತ್ತಿತ್ತರ ಸಿಬ್ಬಂದಿ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಈ ವೇಳೆ ಕರಿಕಲ್ಲು ಕ್ವಾರಿಗಳಿಗೆ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸದ್ಯ 5,000 ಲೀ. ಡೀಸೆಲ್ ತುಂಬಿದ ಟ್ಯಾಂಕರ್ ಮತ್ತು ಚಾಲಕನನ್ನೂ ಸಹಾ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.