ಹುಡುಗರಿಂದ ಬೈಕ್ ಗಳನ್ನು ಕಳವು ಮಾಡಿಸುತ್ತಿದ್ದ ಪೊಲೀಸ್ ಅಂದರ್

ಬೆಂಗಳೂರು: ಬೈಕ್‍ ಗಳನ್ನು ಹುಡುಗರಿಂದ ಕಳವು ಮಾಡಿಸಿ  ನಂಬರ್ ಪ್ಲೇಟ್ ಬದಲಿಸಿ ನಕಲಿ ಆರ್‍ಸಿ ಕಾರ್ಡ್ ಮಾಡಿ ಮಾರಾಟ ಮಾಡುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್ ಸೇರಿದಂತೆ ಇಬ್ಬರನ್ನು ಬೆಂಗಳೂರಿನ ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯಾರಣ್ಯಪುರ ಠಾಣೆಯ ಸಿಬ್ಬಂದಿ ಹೊನ್ನಪ್ಪ ದುರದಪ್ಪ ಮಾಳಗಿ ಅಲಿಯಾಸ್ ರವಿ(26) ಮತ್ತು ರಾಜಸ್ತಾನ ಮೂಲದ ರಮೇಶ್(25) ಬಂಧಿತ ಆರೋಪಿಗಳು.

ಬಂಧಿತರಿಂದ 75 ಲಕ್ಷ ರೂ. ಮೌಲ್ಯದ 52 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೊನ್ನಪ್ಪ ಓಓಡಿ ಆಧಾರದ ಮೇಲೆ ಈಶಾನ್ಯ ವಿಭಾಗದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ.

ಮೂಲತಃ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಕಾಕೋಳ ನಿವಾಸಿಯಾದ ಹೊನ್ನಪ್ಪ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಂಜುಂಡೆ ಗೌಡ ಅವರ ನೇತೃತ್ವದ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿ  ಕಾರ್ಯಾಚರಣೆ ಕೈಗೊಂಡಿದ್ದರು.

ಡಿ.21ರಂದು ಇಬ್ಬರು ಹುಡುಗರು ಅನುಮಾನಾಸ್ಪದವಾಗಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅವರನ್ನು ತಡೆದು ವಿಚಾರಣೆ ನಡೆಸಿಲಾಯಿತು.

ಹೊನ್ನಪ್ಪ ಮತ್ತು ರಮೇಶ್‍ನ ಹೆಸರನ್ನು‌ ಹುಡುಗರು ಹೇಳಿದ್ದಾರೆ. ತಕ್ಷಣ  ಕಾರ್ಯೋನ್ಮುಖರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಆರೋಪಿಗಳು ಹುಡುಗರಿಂದ ಬೈಕ್‍ಗಳನ್ನು ಕಳ್ಳತನ ಮಾಡಿಸಿ ನಂತರ ವಾಹನಗಳ ನಂಬರ್ ಪ್ಲೇಟ್‍ಗಳನ್ನು ಬದಲಿಸಿ ನಕಲಿ ಆರ್‍ಸಿ ಕಾರ್ಡ್‍ಗಳನ್ನು ಮಾಡಿ ಬೆಂಗಳೂರು, ರಾಣಿಬೆನ್ನೂರು, ಹಾವೇರಿ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.