ಚಾಮರಾಜನಗರ: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ.
ಈವರೆಗೆ ಅರ್ಜಿ ಸಲ್ಲಿಸಿದ್ದ 2,534 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಿದ್ದು, ಒಟ್ಟು 69.50 ಲಕ್ಷ ರೂ. ಪಾವತಿಯಾಗಿದೆ. ಮೂವರು ವಿದ್ಯಾರ್ಥಿಗಳ ಅಪೂರ್ಣ ಮಾಹಿತಿಯಿಂದ ಅವರ ಖಾತೆಗಷ್ಟೇ ಹಣ ಪಾವತಿಯಾಗಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಚಂದ್ರಕಲಾ ತಿಳಿಸಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಮೊದಲ ಸಚಿವ ಸಂಪುಟ ಸಭೆ ನಡೆಸಿದ ನಂತರ ಈ ಮಹತ್ವಾಕಾಂಕ್ಷೆ ಯೋಜನೆ ಘೋಷಿಸಿದ್ದರು. ಎಸ್ ಎಸ್ ಎಲ್ ಸಿ ನಂತರದ ಶಿಕ್ಷಣ ಪಡೆಯುವ ರೈತರ ಮಕ್ಕಳು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರಲಿದ್ದು, ಬೇರೆ ವಿದ್ಯಾರ್ಥಿ ವೇತನ ಪಡೆಯುವ ರೈತರ ಮಕ್ಕಳು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಚಂದ್ರಕಲಾ ಅವರು ಮನವಿ ಮಾಡಿದ್ದಾರೆ.
ವೇತನ ಪಡೆದಿರುವವರಲ್ಲಿ ಚಾಮರಾಜನಗರ ತಾಲೂಕಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 887 ಮಂದಿ ವಿದ್ಯಾರ್ಥಿಗಳಿಗೆ 24.4 ಲಕ್ಷದಷ್ಟು ವಿದ್ಯಾರ್ಥಿ ವೇತನ ಬಂದಿದೆ. ಕೊಳ್ಳೇಗಾಲ ಮತ್ತು ಹನೂರು ತಾಲೂಕು ಒಟ್ಟಾಗಿ 834 ವಿದ್ಯಾರ್ಥಿಗಳಿಗೆ 22.81 ಲಕ್ಷ ಹಣ ಜಮೆ ಆಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ 733 ಮಂದಿಗೆ 19.97 ಲಕ್ಷ ಜಮೆಯಾಗಿದೆ. ಯಳಂದೂರು ತಾಲೂಕಿನಲ್ಲಿ ಅತಿ ಕಡಿಮೆ ಅಂದರೆ 80 ವಿದ್ಯಾರ್ಥಿಗಳಿಗೆ ಮಾತ್ರ 2.26 ಲಕ್ಷ ರೂ. ವಿದ್ಯಾರ್ಥಿ ವೇತನ ಬಂದಿದೆ ಎಂದು ಅವರು ಮಾಹಿತಿ ನೀಡಿದರು.