ಮೈಸೂರು: ಮೋಸ ಹೋಗೋರು ಇರೋ ತನಕ ಮೋಸ ಮಾಡೋರು ಇದ್ದೇ ಇರುತ್ತಾರೆ. ಇದಕ್ಕೊಂದು ಉದಾಹರಣೆ ಇಲ್ಲಿದೆ.
ಫೋನ್ ಪೇ, ಗೂಗಲ್ ಪೇ, ಎಟಿಎಂ ಬಳಸುವ ಅಂಗಡಿಗಳ ಮಾಲೀಕರು ಬಹಳ ಹುಷಾರಾಗಿರಿ.
ವಹಿವಾಟು ಆದ ನಂತರ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಪಾವತಿಸಿದಾಗ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಇಲ್ಲದಿದ್ದರೆ ವಂಚನೆಗೊಳಗಾಗಬೇಕಾಗುತ್ತದೆ.
ಇದೀಗ ಡಿಜಿಟಲ್ ಕಳ್ಳರು ಹುಟ್ಟಿಕೊಂಡಿದ್ದಾರೆ. ಎಚ್ಚರ ತಪ್ಪಿದರೆ ಟೋಪಿ ಹಾಕಿಸಿಕೊಳ್ಳೋದು ಗ್ಯಾರಂಟಿ.
ಆನ್ಲೈನ್ ಮೂಲಕ ಪೇ ಮಾಡಿದ್ದೇವೆ ಅಂತ ನಂಬಿಸುವ ಖತರ್ನಾಕ್ ಕಳ್ಳರು ಬಹಳಷ್ಟು ಮಂದಿಯನ್ನು ಯಾಮಾರಿಸುತ್ತಿದ್ದಾರೆ.
ಮೈಸೂರಿನಲ್ಲಿಯೂ ಅಂತಹುದೊಂದು ಘಟನೆ ಬೆಳಕಿಗೆ ಬಂದಿದೆ.
ಮೈಸೂರಿನ ಸರಸ್ವತಿಪುರಂ ನಲ್ಲಿರುವ ಉದ್ಯಮಿಯೊಬ್ಬರಿಗೆ ಕಳ್ಳರ ಗ್ಯಾಂಗ್ ಇದೇ ರೀತಿ ವಂಚಿಸಿ ಪರಾರಿಯಾಗಿದೆ.
ಬಟ್ಟೆ ಅಂಗಡಿಗೆ ಬಂದ 5 ಮಂದಿಯ ತಂಡವೊಂದು ವ್ಯಾಪಾರ ವಹಿವಾಟು ನಡೆಸಿದೆ.
ಈ ತಂಡ 16 ಸಾವಿರ ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಗೂಗಲ್, ಫೋನ್ ಪೇನಲ್ಲಿ ಹಣ ನಿಮ್ಮ ಖಾತೆಗೆ ಬಂದಿದೆ ಅಂತ ಮೆಸೇಜ್ ತೋರಿಸಿದೆ.
ಆದರೆ ವ್ಯಾಪಾರಿಯ ಖಾತೆಗೆ ಹಣ ಬಂದಿರಲಿಲ್ಲ. ಹಣ ಕಳುಹಿಸಿದ್ದೇವೆ ನೋಡಿ ಎಂದು ತೋರಿಸಿದ್ದು, ಒಮ್ಮೊಮ್ಮೆತಕ್ಷಣ ಹಣ ಬರಲ್ಲ ಆಮೇಲೆ ಬರುತ್ತೆ ಎಂದು ತಂಡ ಹೇಳಿದೆ.
ಈ ಮಾತನ್ನು ನಂಬಿದ ಅಂಗಡಿ ಮಾಲಿಕರು ತಂಡ ಖರೀದಿಸಿದ ವಸ್ತುಗಳನ್ನು ಕೊಟ್ಟು ಕಳುಹಿಸಿದ್ದಾರೆ.
ಬಹಳ ಸಮಯವಾದರೂ ಹಣ ಖಾತೆಗೆ ಜಮಾ ಆಗಿಲ್ಲ. ಕ್ರೆಡಿಟ್ ಮೆಸೇಜ್ ರೀಚ್ ಆದ ಬಳಿಕ ವಂಚಕರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ನಂತರ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿದಾಗ ಮೋಸ ಹೋಗಿರೋದು ಬೆಳಕಿಗೆ ಬಂದಿದೆ. ಬಟ್ಟೆ ಅಂಗಡಿಯ ಮಾಲೀಕ ಜಯಶಂಕರ್ ಇದೀಗ ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.