ಹಿರಿಯ ಸಚಿವರು ರಾಜಿನಾಮೆ ನೀಡಲಿ -ರೇಣುಕಾಚಾರ್ಯ ಸಲಹೆ

ಹುಬ್ಬಳ್ಳಿ: ಈಗಾಗಲೇ ಎರಡು ಮೂರು ಬಾರಿ ಸಚಿವರಾಗಿದ್ದವರು, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ, ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಸಲಹೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಅನುಭವಿಸಿದವರು ಪಕ್ಷ ಸಂಘಟನೆಗೆ ಒತ್ತು ಕೊಡಲಿ,

ಮುಂದೆ ವಿಧಾನಸಭೆ ಚುನಾವಣೆ ಬರಲಿದೆ. ಹೀಗಾಗಿ ಪಕ್ಷದ ಸಂಘಟನೆಗೆ ಹಿರಿಯರು ಒತ್ತು ಕೊಡಬೇಕು ಎಂದು ಮನವಿ ಮಾಡಿದರು.

ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುವ ಕೆಲಸವನ್ನು ಹಿರಿಯರು ಮಾಡಬೇಕು. ಅಧಿಕಾರ ಅನುಭವಿಸಿದ ನಾಯಕರು ಸಚಿವ ಸ್ಥಾನ ತ್ಯಾಗ ಮಾಡಲಿ. ನನಗೇ ಸಚಿವ ಸ್ಥಾನ ಕೊಡಬೇಕೆಂದಿಲ್ಲ, ಯಾರಿಗೆ ಬೇಕಾದ್ರೂ ಸಚಿವ ಸ್ಥಾನ ಕೊಡಲಿ ಹೊಸ ಮುಖಗಳಿಗೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು ಎಂದು ಹೇಳಿದರು.

ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕರ್ನಾಟಕ ಬಂದ್ ಕರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಇದು ಕಾಂಗ್ರೆಸ್ ಪ್ರಾಯೋಜಿತ ಹೋರಾಟ ಎಂದು ಟೀಕಿಸಿದರು.

ಕೋವಿಡ್ ನಿಂದ ಜನ ಬಳಲಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಂದ್ ಆಚರಿಸುವುದು ಸರಿಯಲ್ಲ. ಎಂಇಎಸ್ ಮೇಲಿನ ನಿರ್ಬಂಧಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಬಂದ್ ಆಚರಿಸಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.