ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯತಿ ಮರು ಚುನಾವಣೆಯಲ್ಲಿ ಉಸ್ತುವಾರಿ ಸಚಿವ ಡಾ. ಸುಧಾಕರ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಐದು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲದರಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಇದರೊಂದಿಗೆ ಸಚಿವ ಸುಧಾಕರ್ ಅವರ ಜಿಲ್ಲೆಯಲ್ಲಿನ ರಾಜಕೀಯ ನಾಗಾಲೋಟ ಮುಂದುವರಿದಿದೆ.
ಮರು ಚುನಾವಣೆ ನಡೆದ ಮಂಚೇನಹಳ್ಳಿ ತಾಲೂಕಿನ ವರವಣಿ ಹಾಗೂ ರಾಯನಕಲು, ಚಿಕ್ಕಬಳ್ಳಾಪುರ ತಾಲೂಕು ಕಾರಿಗಾನಪಾಳ್ಯ, ಕಾಮಗಾನಹಳ್ಳಿ ಮತ್ತು ನಾಯನಹಳ್ಳಿ ಪಂಚಾಯತಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಅಭಿವೃದ್ಧಿಗೆ ಸಂದ ಜಯ : ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಡಾ.ಕೆ. ಸುಧಾಕರ್ ಅವರು,ಇದು ಜಿಲ್ಲೆಯ ಜನತೆ ಅಭಿವೃದ್ಧಿ ಪರ ಇದ್ದಾರೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವು ನನಗೆ ಸಂತಸ ತಂದಿದೆ. ಈ ಗೆಲುವು ಅಭಿವೃದ್ಧಿಗೆ ಸಂದ ಗೆಲುವು ಎಂದು ಎಂದಿದ್ದಾರೆ.
ಪ್ರತಿಪಕ್ಷಗಳ ಕೆಲ ನಾಯಕರ ಅಪಪ್ರಚಾರಗಳಿಗೆ ಕಿವಿಗೊಡದೆ ಮತದಾರರು ಗಟ್ಟಿಯಾಗಿ ತಮ್ಮಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.