ಮೈಸೂರು:ಮೈಸೂರಿನಲ್ಲಿ ವಾಮಾಚಾರಕ್ಕೆ ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಹೇಯ ಘಟನೆ ನಡೆದಿದೆ.
ಧನುರ್ ಅಮಾವಾಸ್ಯೆ ದಿನದಂದು ಎಸ್ಎಸ್ಎಲ್ ಸಿ ವಿದ್ಯಾರ್ಥಿಯನ್ನು ಸ್ನೇಹಿತರೆ ಬಲಿಕೊಟ್ಟಿರುವ ಆಘಾತಕಾರಿ ಘಟನೆ ಮೈಸೂರಿನ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದ ಸಿದ್ದರಾಜು ಎಂಬುವರ ಪುತ್ರ ಮಹೇಶ್ ಅಲಿಯಾಸ್ ಮನು (16) ವಾಮಾಚಾರಕ್ಕೆ ಬಲಿಯಾದ ವಿದ್ಯಾರ್ಥಿ.
ಧನುರ್ ಮಾಸದ ಅಮಾವಾಸ್ಯೆ ದಿನದಂದು ಕೆರೆ ಬಳಿ ವಾಮಾಚಾರ ಮಾಡಿ ಸ್ನೇಹಿತರೇ ಅಮಾಯಕ ಬಾಲಕನನ್ನ ಬಲಿ ಪಡೆದಿದ್ದಾರೆ.
ನಂಜನಗೂಡು ತಾಲೂಕು ಹಳೆಪುರ ಗ್ರಾಮದ ಕೆರೆಯಲ್ಲಿ ಬಾಲಕನ ಮೃತದೇಹ ದೊರೆತಿದೆ.
ಧನುರ್ ಮಾಸದ ಅಮಾವಾಸ್ಯೆ ದಿನ ಮಟಮಟ ಮಧ್ಯಾಹ್ನ ಈ ಕೃತ್ಯ ಎಸಗಿದ್ದಾರೆ.
ಈ ಪೈಕಿ ಒಬ್ಬ ಆರೋಪಿ ಚಿಕ್ಕ ವಯಸ್ಸಿನಲ್ಲೇ ತಾತನಿಂದ ವಾಮಾಚಾರ ಮಾಡುವುದನ್ನ ಕಲಿತಿದ್ದ ಎಂದು ಗೊತ್ತಾಗಿದೆ.
ಧನುರ್ ಮಾಸದ ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ಸಿದ್ದಿಗಳು ನೆರವೇರುತ್ತವೆ ಎಂಬ ನಂಬಿಕೆ ವಿದ್ಯಾರ್ಥಿಗಳಿಗಿತ್ತೆಂದೂ ಹಾಗಾಗಿ ತಮ್ಮ ಸ್ನೇಹಿತನನ್ನೇ ಬಲಿ ಪಡೆದಿದ್ದಾರೆ.
ಅಮಾವಾಸ್ಯೆ ದಿನ ಮಹೇಶ್ ನನ್ನು ಪುಸಲಾಯಿಸಿದ ಮೂವರು ಕಿರಾತಕರು ಕೆರೆ ಬಳಿಗೆ ಕರೆತಂದಿದ್ದಾರೆ. ಸ್ಥಳದಲ್ಲಿ ಗೊಂಬೆಯೊಂದನ್ನ ತಯಾರಿಸಿ ಅದರ ಮೇಲೆ ಮಹೇಶ್ ಹೆಸರು ಬರೆದು ನಂತರ ಪೂಜೆ ಮಾಡಿದ್ದಾರೆ.
ಸ್ನೇಹಿತರ ಉದ್ದೇಶ ಅರಿಯದ ಅಮಾಯಕ ಮಹೇಶ್ ಜೊತೆಗೆ ಬಂದಿದ್ದಾನೆ.
ಪೂಜೆ ನಂತರ ಮಹೇಶ್ ನನ್ನು ಆರೋಪಿಗಳು ಕೆರೆಗೆ ತಳ್ಳಿ ನಂತರ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು.
ಮಹೇಶ್ ಕೆರೆಗೆ ಬಿದ್ದಿದ್ದಾನೆ ಎಂದು ಸ್ನೇಹಿತನೊಬ್ಬ ಗ್ರಾಮದ ಹಿರಿಯರಿಗೆ ಮಾಹಿತಿ ತಿಳಿಸಿದ್ದಾನೆ.
ಗ್ರಾಮದ ಜನ ಕೆರೆಯಲ್ಲಿ ಶೋಧನೆ ಮಾಡಿದಾಗ ಮಹೇಶ್ ಮೃತದೇಹ ದೊರೆತಿದೆ.
ಅಲ್ಲದೆ ಕೆರೆ ಬಳಿ ವಾಮಾಚಾರ ಮಾಡಿದ ಕುರುಹುಗಳಾದ ಗೊಂಬೆ,ಕೋಳಿ,ಮಡಿಕೆ ಸೇರಿದಂತೆ ಇನ್ನಿತರ ಪದಾರ್ಥಗಳು ದೊರೆತಿದೆ.
ಕೌಲಂದೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.