ಮುಂಬೈ:ಬುಲ್ಲಿ ಬಾಯಿ ಅಪ್ಲಿಕೇಷನ್ ನಲ್ಲಿ ಮುಸ್ಲಿಂ ಮಹಿಳೆಯರ ಅವಹೇಳನ ಚಿತ್ರಣ ಮಾಡಿದ ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಗಿಟ್ ಹಬ್ ತಾಣದಲ್ಲಿ ಅಭಿವೃದ್ಧಿಪಡಿಸಲಾದ ಬುಲ್ಲಿ ಬಾಯಿ ಅಪ್ಲಿಕೇಷ್ ನಲ್ಲಿ 100ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ಪ್ರಕಟಿಸಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಕ್ಯಾಪ್ಷನ್ ನೀಡಲಾಗಿತ್ತು.
ಕಳೆದ ಆರು ತಿಂಗಳಲ್ಲಿ ನಡೆಯುತ್ತಿರುವ ಈ ರೀತಿಯ 2ನೇ ಅವಹೇಳನದ ಪ್ರಕರಣದ ಇದಾಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮುಸ್ಲಿಂ ಸಮುದಾಯವಷ್ಟೇ ಅಲ್ಲ ಧರ್ಮಾತೀತವಾಗಿ ಮಹಿಳೆಯರ ಮೇಲಿನ ಅವಹೇಳನದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನ್ ವೈಷ್ಣವ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೈಬರ್ ಕ್ರೈಮ್ ಪೊಲೀಸರ ಮೂಲಕ ತನಿಖೆಗೆ ಆದೇಶಿಸಿದ್ದಾರೆ.
ದೆಹಲಿಯಲ್ಲಿ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್ ನೀಡಿದ್ದು,ಒಂದು ವಾರದೊಳಗಾಗಿ ವಿವರಣೆ ನೀಡುವಂತೆ ಸೂಚಿಸಿದೆ.
ದೆಹಲಿ ಅಲ್ಪಸಂಖ್ಯಾತರ ಆಯೋಗವು ಪೊಲೀಸ್ ಆಯುಕ್ತ ರಾಕೇಶ್ ಹಸ್ತಾನ ಅವರಿಗೆ ನೋಟೀಸ್ ನೀಡಿ 10 ದಿನಗಳ ಒಳಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದೆ.
ಮಹಾರಾಷ್ಟ್ರದ ಶಿವಸೇನೆಯ ರಾಜ್ಯಸಭಾ ಸದಸ್ಯೆ ಪ್ರಿಯಾಂಕ ಚರ್ತುವೇದಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪ್ರಕರಣದ ಬಗ್ಗೆ ಗಂಭೀರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಜ.1ರಂದು ವಿವಿಧ ಸೆಕ್ಷನ್ಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಬುಲ್ಲಿ ಬಾಯಿ ಆ್ಯಪ್ನ ಹೋಸ್ಟರ್ ಆಗಿರುವ ಗಿಟ್ ಹಬ್ಗೆ ನೋಟಿಸ್ ನೀಡಲಾಗಿದ್ದು, ಅಪ್ಲಿಕೇಶನ್ ಅಭಿವೃದ್ಧಿಪಡಿಸಿದವರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಆಕ್ಷೇಪಾರ್ಹ ದತ್ತಾಂಶಗಳ ಪ್ರಚಾರಕ್ಕೆ ಅವಕಾಶ ನೀಡಿದ್ದಕ್ಕಾಗಿ ಟ್ವಿಟರ್ಗೂ ನೋಟಿಸ್ ನೀಡಲಾಗಿದೆ.
ಬುಲ್ಲಿ ಬಾಯಿ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಪ್ರಮುಖ ಬೆಳವಣಿಗೆಯಲ್ಲಿ ಮುಂಬೈ ಪೊಲೀಸರು ಐಪಿ ಅಡ್ರೆಸ್ ಆಧರಿಸಿ ತನಿಖೆ ನಡೆಸಿದ್ದು, ಬುಲ್ಲಿ ಬಾಯಿ ಟ್ವಿಟರ್ ಖಾತೆಯ ಐದು ಮಂದಿ ಹಿಂಬಾಲಕರಲ್ಲಿ ಒಬ್ಬರಾದ ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈತ ಬುಲ್ಲಿ ಆ್ಯಪ್ನಲ್ಲಿ ಆಕ್ಷೇಪಾರ್ಹ ಫೋಟೋಗಳಿಗೆ ಬೆಂಬಲ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಬುಲ್ಲಿ ಬಾಯಿ ಆ್ಯಪ್ನ ಹಿಂದೆ ಕೆಲಸ ಮಾಡಿದವರ ಪತ್ತೆಗೆ ವಿದ್ಯಾರ್ಥಿಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ.