ಚಾಮರಾಜನಗರ: ಮಗಳ ಮನೆಗೆ ತೆರಳುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಟಿಪ್ಪರ್ ನೂರಿನ್ನೂರು ಮೀಟರ್ ಎಳೆದೊಯ್ದ ಭೀಕರ ದುರ್ಘಟನೆ ಗುಂಡ್ಲುಪೇಟೆ ತಾಲೂಕಿನ ಹಳ್ಳದ ಮಾದಳ್ಳಿ ಗೇಟ್ ಸಮೀಪ ನಡೆದಿದೆ.
ಘಟನೆಯಲ್ಲಿ ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದ ಮುದ್ದರಾಜಪ್ಪ (50) ಮೃತಪಟ್ಟಿದ್ದಾರೆ.
ಮಗಳ ಮನೆಯಾದ ಗೋಪಾಲಪುರಕ್ಕೆ ಬೈಕ್ನಲ್ಲಿ ಮುದ್ದರಾಜಪ್ಪ ತೆರಳುತ್ತಿದ್ದ ವೇಳೆ ವೇಗದಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸಮೇತ ಸವಾರನನ್ನು ಎಳೆದೊಯ್ದಿದೆ.
ಟಿಪ್ಪರ್ ಲಾರಿ ಚಾಲಕನ ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಿಂದ ಕುಪಿತಗೊಂಡ ರೈತ ಮುಖಂಡರು, ಸ್ಥಳೀಯರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಟಿಪ್ಪರ್ ಗಳಿಗೆ ಕಡಿವಾಣ ಹಾಕದ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಚಾಮರಾಜನಗರ ಡಿವೈಎಸ್ಪಿ ಸ್ಥಳಕ್ಕೆ ಭೇಟಿಕೊಟ್ಟು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಬೇಗೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮೃತ ಮುದ್ದರಾಜಪ್ಪರ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.